ಅಥಣಿ: ಯಲಿಹಡಲಗಿ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ಇರುವ ಬ್ಯಾನರ್‌ಗೆ ಕೆಲವು ಕಿಡಿಗೇಡಿಗಳು ಹಾನಿ ಉಂಟು ಮಾಡಿದ್ದರು. ಈ ಹಿನ್ನೆಲೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಐಗಳಿ ಹಾಗೂ ಅಥಣಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪ್ರತಿಭಟನಾಕಾರರ ಮನವೊಲಿಸಿದ್ದಾರೆ.
ಒಂದು ಕಡೆ ಬೆಳಗಾವಿ ಪೀರನವಾಡಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆಗಾಗಿ ಗಲಾಟೆ ನಡೆದು ಕೊನೆಗೆ ಮರಾಠಿ ಮತ್ತು ಕನ್ನಡಿಗರ ನಡುವೆ ಸಂಧಾನ ಏರ್ಪಟ್ಟ ಹಿನ್ನೆಲೆಯಲ್ಲಿ ಶಾಂತಿ ಸಭೆ ಏರ್ಪಟ್ಟಿದೆ. ಈ ನಡುವೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಯಲಹಡಗಿ ಗ್ರಾಮದಲ್ಲಿ ಬಾಬಾ ಸಾಹೇಬರ ಭಾವಚಿತ್ರ ಅಳವಡಿಸಿದ ಹಿನ್ನೆಲೆಯಲ್ಲಿ ಕೆಲವು ಕಿಡಿಗೇಡಿಗಳು ರಾತ್ರಿ ಸಮಯದಲ್ಲಿ ಕಲ್ಲು ತೂರಿ ಹೂವಿನ ಹಾರ ಹರಿದು ಅವಮಾನಿಸಿರುವುದನ್ನು ಖಂಡಿಸಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಥಣಿ ಐಗಳಿ ರಸ್ತೆಯನ್ನು ಬಂದ್ ಮಾಡಿ ಟೈಯರ್ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಬಹುಜನ ಸಮಾಜ ಪಕ್ಷದ ರಾಜ್ಯ ಕಾರ್ಯದರ್ಶಿ ದಯಾನಂದ ವಾಘ್ಮೋರೆ, ಬಾಬಾ ಸಾಹೇಬರ ಸಂವಿಧಾನದ ಫಲವಾಗಿ ಇಂದು ಬಹು ಜನರು ಸಮಾಜದಲ್ಲಿ ತಲೆ ಎತ್ತಿ ಸ್ವಾಭಿಮಾನದಿಂದ ಬದುಕು ನಡೆಸುವಂತಾಗಿದೆ. ಎಲ್ಲಿಯವರೆಗೆ ನಾವು ಅನ್ಯಾಯದ ವಿರುದ್ಧ ಧ್ವನಿ ಎತ್ತುವುದಿಲ್ಲವೋ ಅಲ್ಲಿಯವರೆಗೆ ನಮ್ಮ ಮೇಲಿನ ದೌರ್ಜನ್ಯ ನಿಲ್ಲುವುದಿಲ್ಲ. ಆದ್ದರಿಂದ ಎಲ್ಲ ಗ್ರಾಮಗಳಲ್ಲಿ ಬಹುಜನರು ಒಂದಾಗಿ ಅನ್ಯಾಯದ ವಿರುದ್ದ ಧ್ವನಿ ಎತ್ತಬೇಕಿದೆ. ಇಂದು ಸಂವಿಧಾನ ಶಿಲ್ಪಿ ಭಾರತರತ್ನ ಬಾಬಾ ಸಾಹೇಬರನ್ನು ಅಗೌರವದಿಂದ ಕಾಣುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಕೆಲಸವಾಗಬೇಕಿದೆ ಎಂದರು.
ಈ ವೇಳೆ ಸ್ಥಳದಲ್ಲಿ ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆ, ಐಗಳಿ ಪೊಲೀಸ್ ಠಾಣೆಯ ಪಿಎಸ್ಐ ಶಿವರಾಜ್ ನಾಯಿಕವಾಡಿ ಮತ್ತು ಅಥಣಿ ಡಿವೈಎಸ್ಪಿ ಎಸ್.ವಿ ಗಿರೀಶ ಅವರು ಸ್ಥಳಕ್ಕೆ ಬಂದು ಪ್ರತಿಭಟನಾಕಾರರ ಮನವೊಲಿಸಿ, ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಸ್ಥಳದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಪ್ರತಿಭಟನಾಕಾರು ಕಿಡಿಗೇಡಿಗಳನ್ನು ಬಂಧಿಸುವಂತೆ ಪಟ್ಟು ಹಿಡಿದು ಹಾನಿಯಾದ ಭಾವಚಿತ್ರದ ಎದುರು ಶಾಂತವಾಗಿ ಕುಳಿತು ಪ್ರತಿಭಟನೆಗೆ ಮುಂದಾಗಿದ್ದರು. ಹೊಸ ಬ್ಯಾನರ್ ಅಳವಡಿಸಿ ತಪ್ಪಿತಸ್ಥರನ್ನು ಬಂಧಿಸುವ ಭರವಸೆ ನೀಡುವ ಮೂಲಕ ಸಮಸ್ಯೆ ಬಗೆಹರಿಸಲಾಯಿತು.