ಬೆಳಗಾವಿ: ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಮಧ್ಯೆ ಮ್ಯೂಸಿಕಲ್ ಚೇರ್ ಸ್ಪರ್ಧೆ ನಡೆಯುತ್ತಿದೆ. ಆದರೆ ಈ ಇಬ್ಬರೂ ಇನ್ನೂ 20 ವರ್ಷ ನಿರುದ್ಯೋಗಿಗಳಾಗಿರಬೇಕು ಎಂದು ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.
ಮೂರು ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅದ್ಭುತ ಸಾಧನೆ ಮಾಡಿದೆ. ಡಿಕೆಶಿ, ಸಿದ್ದರಾಮಯ್ಯ ಇನ್ನೂ 20 ವರ್ಷ ನಿರುದ್ಯೋಗಿಗಳಾಗಿರಬೇಕು. ಪಾಲಿಕೆ ಚುನಾವಣೆ ಫಲಿತಾಂಶವೇ ಇದಕ್ಕೆ ಸಾಕ್ಷಿ ಎಂದರು.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 150 ಸೀಟುಗಳನ್ನು ಬಿಜೆಪಿ ಗೆಲ್ಲಲಿದೆ. ಬಿಜೆಪಿ ಬಗ್ಗೆ ರಾಜ್ಯದ ಜನರಲ್ಲಿ ಅಭಿಮಾನ, ನಂಬಿಕೆ ಹೆಚ್ಚುತ್ತಿದೆ. ಬಿಜೆಪಿಯಿಂದಲೇ ಕರ್ನಾಟಕ ಕಲ್ಯಾಣ ರಾಜ್ಯವಾಗಿ ಮಾರ್ಪಡುತ್ತಿದೆ. ನರೇಂದ್ರ ಮೋದಿ, ಬಸವರಾಜ ಬೊಮ್ಮಾಯಿ ಕಟ್ಟಕಡೆಯ ವ್ಯಕ್ತಿಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ.
ಬಿಜೆಪಿ ಗೆಲ್ಲಿಸಿದ ಮತದಾರ ಪ್ರಭುಗಳಿಗೆ ಪಕ್ಷದಿಂದ ಅಭಿನಂದಿಸುತ್ತೇನೆ. ರಾಷ್ಟ್ರದ ಅಭಿವೃದ್ಧಿ ಚಿಂತನೆಯ ಆಡಳಿತವನ್ನು ಶಿವಾಜಿ ಮಹಾರಾಜರು ಹೊಂದಿದ್ದರು. ಅದೇ ರೀತಿ ಬಿಜೆಪಿ ನಗರಸೇವಕರು ಕಾರ್ಯನಿರ್ವಹಿಸಬೇಕು. ಸರ್ವರ ಏಳಿಗೆ ಬಯಸುವ ಹಿಂದೂ ಸಮಾಜದ ಗೆಲುವು ಇದಾಗಿದೆ. ಬೆಳಗಾವಿ ರಾಜ್ಯದ ಮಾದರಿ ನಗರವಾಗಿ ರೂಪುಗೊಳ್ಳಲಿದೆ ಎಂದು ಹೇಳಿದರು.
'ರೈತರ ಹೆಸರಲ್ಲಿ ಕಾಂಗ್ರೆಸ್ ರಾಜಕಾರಣ'
ನಾಳೆ ಭಾರತ್ ಬಂದ್‌ಗೆ ಕರೆ ವಿಚಾರವಾಗಿ ಮಾತನಾಡುತ್ತಾ, ಇವತ್ತು ರೈತರ ಹೆಸರಿನಲ್ಲಿ ರಾಜಕಾರಣ ನಡೆಯುತ್ತಿದೆ. ಕಳೆದೆರಡು ವರ್ಷದಿಂದ ಇಂತಹ ಹತ್ತಾರು ಪ್ರಯತ್ನಗಳನ್ನು ಮಾಡಿದ್ದಾರೆ. ಆದರೆ ಇಂದು ರೈತರು, ಜನರು ಸರ್ಕಾರದ ಪರವಾಗಿದ್ದಾರೆ. ನಮ್ಮ ಸರ್ಕಾರ ರೈತರ ಪರವಾಗಿದೆ, ಹತ್ತಾರು ಬಾರಿ ಕೇಂದ್ರ ಸರ್ಕಾರ ಚರ್ಚೆಗೆ ಕರೆದಿದೆ. ರೈತರೊಂದಿಗೆ ಚರ್ಚಿಸಲು ಕೇಂದ್ರ ಸರ್ಕಾರ ಸಿದ್ದವಿದೆ. ಇದ್ರಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ ಎಂದರು.
ಇದನ್ನೂ ಓದಿ: ಸಂಕುಚಿತ ಭಾವನೆಯುಳ್ಳವರಿಗೆ ಬೆಳಗಾವಿಯಲ್ಲಿ ಜಾಗವಿಲ್ಲ: ಮಹಾ ನಾಯಕರಿಗೆ ಸಿಎಂ ಖಡಕ್ ಸಂದೇಶ