ಬೆಳಗಾವಿ: ಸವದತ್ತಿಯ ರೇಣುಕಾ ಯಲ್ಲಮ್ಮ ದೇವಸ್ಥಾನ ಸೇರಿದಂತೆ ರಾಜ್ಯದ ವಿವಿಧ ದೇವಸ್ಥಾನಗಳು ಜಿಲ್ಲೆಯ ಪ್ರವಾಹ ಬಾಧಿತ ಸಂತ್ರಸ್ತರಿಗೆ ಇಪ್ಪತ್ತೆರಡು ಸಾವಿರ ಸೀರೆಗಳನ್ನು ಕಳುಹಿಸಿಕೊಡಲಾಗಿದೆ.
ರೇಣುಕಾ ಯಲ್ಲಮ್ಮ ದೇವಸ್ಥಾನದಿಂದ 5 ಸಾವಿರ ಮತ್ತು ಕಲಬುರಗಿಯ ಘತ್ತರಗಿ ಭಾಗ್ಯವಂತಿ ದೇವಸ್ಥಾನ ಕಳುಹಿಸಿದ ಒಂದು ಸಾವಿರ ಸೀರೆಗಳನ್ನು ಜಿಲ್ಲಾಡಳಿತಕ್ಕೆ ಸೋಮವಾರ ನೀಡದ್ದು, ಜಿಲ್ಲಾಧಿಕಾರಿ ಡಾ. ಎಸ್.ಬಿ.ಬೊಮ್ಮನಹಳ್ಳಿ, ಪೊಲೀಸ್ ಆಯುಕ್ತ ಬಿ.ಎಸ್.ಲೋಕೇಶ್ ಕುಮಾರ್ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ರಾಜೇಂದ್ರ ಕೆ.ವಿ. ಸೀರೆಗಳ ಬಂಡಲ್ಗಳನ್ನು ಸ್ವೀಕರಿಸಿ, ಜಿಲ್ಲಾ ಕಚೇರಿಯಿಂದ ಆರಂಭಿಸಲಾಗಿರುವ ಸಾಮಗ್ರಿಗಳ ಸಂಗ್ರಹಣಾ ಕೇಂದ್ರಕ್ಕೆ ಒಪ್ಪಿಸಿದರು.
ಜಿಲ್ಲೆಯಲ್ಲಿ ಪ್ರವಾಹ ಬಾಧಿತ ಗ್ರಾಮಗಳ ಸಂತ್ರಸ್ತರಿಗೆ ರಾಜ್ಯದ ವಿವಿಧ ದೇವಸ್ಥಾನಗಳಿಂದ ಸುಮಾರು 22 ಸಾವಿರ ಸೀರೆಗಳನ್ನು ಕಳುಹಿಸಿಕೊಡಲಾಗಿದೆ. ಬೆಂಗಳೂರು, ಮೈಸೂರು, ರಾಮನಗರ, ಹಾಸನ, ಚಿತ್ರದುರ್ಗ, ಕೋಲಾರ ಮತ್ತು ಮಂಡ್ಯ ಜಿಲ್ಲೆಯ ದೇವಸ್ಥಾನಗಳಿಂದ 8978, ಉಡುಪಿ ಹಾಗೂ ಮಂಗಳೂರಿನಿಂದ 3500, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಯಿಂದ 3500 ಸೀರೆಗಳು ಬೆಳಗಾವಿ ಜಿಲ್ಲೆಯ ಸಂತ್ರಸ್ತರಿಗಾಗಿ ಬಂದಿವೆ.
ಈ ಸೀರೆಗಳನ್ನು ಜಿಲ್ಲಾಮಟ್ಟದಲ್ಲಿ ಸ್ಥಾಪಿಸಲಾಗಿರುವ ಸಾಮಗ್ರಿಗಳ ಸಂಗ್ರಹಣಾ ಕೇಂದ್ರಕ್ಕೆ ನೀಡಲಾಗುತ್ತಿದ್ದು, ಅಲ್ಲಿಂದ ವಿವಿಧ ತಾಲೂಕಿನಲ್ಲಿರುವ ಪರಿಹಾರ ವಿತರಣಾ ಕೇಂದ್ರಗಳಿಗೆ ಕಳುಹಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.