ಬೆಳಗಾವಿ : ರಾಜ್ಯ ಸರ್ಕಾರದ ಭ್ರಷ್ಟಾಚಾರ ವಿಷಯವನ್ನು ನಿಯಮ 69 ರಡಿ ಚರ್ಚಿಸಲು ಅವಕಾಶ ನೀಡಬೇಕೆಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪಟ್ಟು ಹಿಡಿದಿದ್ದರಿಂದ ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರ ನಡುವೆ ವಿಧಾನಸಭೆಯಲ್ಲಿ ವಾಗ್ವಾದ ನಡೆಯಿತು. ಸಿದ್ದರಾಮಯ್ಯ ಪ್ರಸ್ತಾಪಿಸಿದ ವಿಷಯಕ್ಕೆ ಮಾತನಾಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಇದು ನಿಯಮ 69ರಡಿ ಚರ್ಚಿಸಲು ಬರುವುದಿಲ್ಲ. ಇದನ್ನು ಬೇರೊಂದು ನಿಯಮದಡಿ ಚರ್ಚಿಸಲು ಅವಕಾಶ ಕೊಡುತ್ತೇನೆ ಎಂದು ಹೇಳಿದರು.
ಇದಕ್ಕೆ ಆಕ್ಷೇಪಿಸಿದ ಸಿದ್ದರಾಮಯ್ಯ, ಇದು ಅತ್ಯಂತ ಮಹತ್ವದ ಮತ್ತು ತುರ್ತಾಗಿರುವ ವಿಷಯ. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಭ್ರಷ್ಟಾಚಾರ ನಡೆದಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ. ಪ್ರತಿದಿನ ಸರ್ಕಾರದ ಮೇಲೆ ಒಂದಲ್ಲೊಂದು ಆರೋಪಗಳು ಬರುತ್ತಲೇ ಇವೆ. ಹೀಗಾಗಿ ಸಾರ್ವಜನಿಕ ಮಹತ್ವದ ವಿಷಯವಾಗಿದ್ದು ಚರ್ಚೆಗೆ ಅವಕಾಶ ನೀಡಬೇಕೆಂದು ಮನವಿ ಮಾಡಿದರು.
ನಾನು ಈ ಹಿಂದೆಯೂ ಪ್ರಸ್ತಾಪಿಸಿದ್ದೆ. ಆಗಲೂ ಸರ್ಕಾರ ಚರ್ಚೆಗೆ ಅವಕಾಶವನ್ನೇ ಕೊಡಲಿಲ್ಲ. ಪ್ರತಿಬಾರಿ ಏನಾದರೊಂದು ಸಬೂಬು ಹೇಳಿ ಸರ್ಕಾರ ನುಣುಚಿಕೊಳ್ಳುತ್ತಿದೆ. ಅವರಿಗೆ ಭ್ರಷ್ಟಾಚಾರದ ಬಗ್ಗೆ ಚರ್ಚಿಸಲು ಇಷ್ಟವಿದ್ದಂತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ನಾವು ಚರ್ಚೆಗೆ ಅವಕಾಶ ಕೊಡಬೇಡಿ ಎಂದು ಎಲ್ಲಿಯೂ ಹೇಳಿಲ್ಲ. ನಿಯಮ 69ರಡಿ ಚರ್ಚೆ ಆರಂಭಿಸಿದರೆ ಕೇವಲ ಪ್ರತಿಪಕ್ಷದ ನಾಯಕರು ಮಾತ್ರ ಇದರಲ್ಲಿ ಭಾಗಿಯಾಗಬಹುದು. ಎಲ್ಲ ಸದಸ್ಯರೂ ಚರ್ಚೆಯಲ್ಲಿ ಪಾಲ್ಗೊಳ್ಳಬೇಕು ಎಂಬುದು ನಮ್ಮ ಇಚ್ಚೆ. ಸರ್ಕಾರ ಎಲ್ಲಿಯೂ ಕೂಡ ಚರ್ಚೆಗೆ ಹೆದರುತ್ತಿಲ್ಲ ಎಂದರು.
ಪ್ರತಿ ಸಂದರ್ಭದಲ್ಲೂ ವಿಷಯ ಪ್ರಸ್ತಾಪಿಸಿದಾಗ, ಸಿದ್ದರಾಮಯ್ಯ ಅವರು ನಾವು ಚರ್ಚೆಗೆ ಹೆದರುತ್ತಿದ್ದೇವೆ ಎಂದು ಗೂಬೆ ಕೂರಿಸುವ ಕೆಲಸ ಮಾಡುತ್ತಾರೆ. ನಾವು ಚರ್ಚೆಗೆ ಸಿದ್ದವಿದ್ದೇವೆ. ನಿಯಮ 69ರಡಿ ಚರ್ಚೆಗೆ ಅವಕಾಶ ಕೊಡಬೇಕಾದರೆ ಅದು ಇತ್ತೀಚಿನ ಘಟನೆಯಾಗಬೇಕು. ನಿಯಮಗಳನ್ನು ಗಾಳಿಗೆ ತೂರಿ ಸದನ ನಡೆಸಲು ಅವಕಾಶವಿಲ್ಲ ಎಂದು ತಿರುಗೇಟು ನೀಡಿದರು. ಆಗ ಆಡಳಿತ ಪಕ್ಷ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಸ್ಪೀಕರ್ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಇದನ್ನೂ ಓದಿ: ಕೊಡಗಿಗೆ ಸದ್ಯಕ್ಕಿಲ್ಲ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಸಚಿವ ಸುಧಾಕರ್