ಬೆಳಗಾವಿ: ತಾಯಿ ನನ್ನ ಮಗಳಿಗೆ ನಮಗಿಂತ 100 ಪಟ್ಟು ಅಧಿಕ ಆಸ್ತಿ ಇರುವ ವರನೊಂದಿಗೆ ಕಲ್ಯಾಣ ಪ್ರಾಪ್ತಿಗೊಳಿಸು, ತಾಯಿ ನನಗೆ ಪಿಎಸ್‍ಐ ಹುದ್ದೆ ಕರುಣಿಸು, ಅಮ್ಮ ನನ್ನ ಬಳಿ ಸಾಲ ಪಡೆದವರು ನಿನ್ನ ದಯೆಯಿಂದ ಮರಳಿಸುವಂತೆ ಮಾಡು, ತಾಯಿ ನಾನು ಇಷ್ಟಪಟ್ಟವರೊಂದಿಗೆ ನನಗೆ ವಿವಾಹವಾಗಿಸು.. ಹೀಗೆ ಸವದತ್ತಿಯ ಯಲ್ಲಮ್ಮ ಗುಡ್ಡದ ರೇಣುಕಾದೇವಿ ಬಳಿ ಭಕ್ತರು ವಿಚಿತ್ರ ಬೇಡಿಕೆಗಳನ್ನು ಇಟ್ಟಿರುವುದು ಬಹಿರಂಗವಾಗಿದೆ.
ಶ್ರೀಕ್ಷೇತ್ರ ಯಲ್ಲಮ್ಮನ ಗುಡ್ಡದಲ್ಲಿ ನಾಲ್ಕು ದಿನಗಳಿಂದ ಹುಂಡಿ ಎಣಿಕೆ ಕಾರ್ಯ ನಡೆಯುತ್ತಿದೆ. ಭಕ್ತಾಧಿಗಳು ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದ ಹುಂಡಿಯಲ್ಲಿ ಹಾಕಿರುವ ಪತ್ರಗಳಲ್ಲಿನ ಸಾರಾಂಶವಿದು. ದೇಶದ ನಾನಾ ಭಾಗಗಳಿಂದ ಯಲ್ಲಮ್ಮನಗುಡ್ಡಕ್ಕೆ ಆಗಮಿಸಿದ ಭಕ್ತರು, ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಕಾಗದದಲ್ಲಿ ಬರೆದು ಹುಂಡಿಯಲ್ಲಿ ಹಾಕಿದ್ದಾರೆ. ಅವುಗಳನ್ನು ಈಡೇರಿಸಿದರೆ ಹರಕೆ ತೀರಿಸುವುದಾಗಿಯೂ ತಿಳಿಸಿದ್ದಾರೆ. ಹೆಚ್ಚಿನವರು ತಮ್ಮ ಮಗ ಅಥವಾ ಮಗಳಿಗೆ ಉತ್ತಮ ವಧು - ವರನನ್ನು ಕರುಣಿಸುವಂತೆ ಬೇಡಿಕೊಂಡಿದ್ದಾರೆ.
ಓದಿ: ರಷ್ಯಾ ಉಕ್ರೇನ್ ನಾಗರಿಕರನ್ನು ಅಪಹರಣ ಮಾಡುತ್ತಿದೆ: ಗಂಭೀರ ಆರೋಪ ಮಾಡಿದ ಕೀವ್
ದಾಖಲೆ ಪ್ರಮಾಣದಲ್ಲಿ ದೇಣಿಗೆ ಸಂಗ್ರಹ: ನಾಲ್ಕು ದಿನಗಳ ಎಣಿಕೆ ಕಾರ್ಯದಲ್ಲಿ ಯಲ್ಲಮ್ಮ ದೇವಸ್ಥಾನ ಹುಂಡಿಯಲ್ಲಿ 1.30 ಕೋಟಿ ರೂ. ಸಂಗ್ರಹವಾಗಿದೆ ಎಂದು ಯಲ್ಲಮ್ಮ ದೇವಸ್ಥಾನ ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಉಳ್ಳಾಗಡ್ಡಿ ತಿಳಿಸಿದರು.
ಸುದ್ದಿಗಾರರಿಗೆ ಈ ಕುರಿತು ಮಾಹಿತಿ ನೀಡಿದ ಅವರು, 12. 45 ಲಕ್ಷ ರೂ ಮೌಲ್ಯದ ಚಿನ್ನ ಹಾಗೂ 3.08 ಲಕ್ಷ ಮೌಲ್ಯದ ಬೆಳ್ಳಿ ಆಭರಣಗಳನ್ನು ಭಕ್ತರು ದೇವಿಗೆ ಕಾಣಿಕೆಯಾಗಿ ನೀಡಿದ್ದಾರೆ. ಹಲವರು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ದೇವಿಗೆ ಕಾಗದದಲ್ಲಿ ಬರೆದು ಹುಂಡಿಯಲ್ಲಿ ಹಾಕಿದ್ದಾರೆ. ಇನ್ನೂ ಎರಡು ದಿನಗಳ ಕಾಲ ಹುಂಡಿ ಎಣಿಕೆ ಕಾರ್ಯ ನಡಿಯಲಿದೆ ಎಂದರು.