ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ಮತ್ತು ಕಾಗವಾಡ ಮತ ಕ್ಷೇತ್ರಗಳಲ್ಲಿನ 4 ಜನರಿಗೆ ಸಚಿವ ಸ್ಥಾನಮಾನ ದೊರಕಿದ್ದು, ಎಲ್ಲರೂ ಪಕ್ಷಾತೀತವಾಗಿ ಕೆಲಸ ಮಾಡಿದರೆ ಜಿ. ಪಂ. ಕ್ಷೇತ್ರಗಳಲ್ಲಿ ಸಮಗ್ರ ಅಭಿವೃದ್ದಿ ಮಾಡಲು ಸಾಧ್ಯವಿದೆ. ಅಧಿಕಾರಿಗಳು ಮತ್ತು ಜನಪತ್ರಿನಿಧಿಗಳ ಒಗ್ಗೂಡಿ ಕೆಲಸ ಮಾಡಿದಾಗ ಮಾತ್ರ ಅಭಿವೃದ್ದಿ ಸಾಧ್ಯ ಎಂದು ಜಿ. ಪಂ. ಅಧ್ಯಕ್ಷೆ ಆಶಾ ಪ್ರಶಾಂತ ಐಹೊಳೆ ಹೇಳಿದರು.
ತಾ. ಪಂ ಸಭಾ ಭವನದಲ್ಲಿ ಆಯೋಜಿಸಲಾಗಿದ್ದ ಅಥಣಿ ಮತ್ತು ಕಾಗವಾಡ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಶಾ ಅವರು, ಅಧಿಕಾರಿಗಳು ಸಭೆಗಳಿಗೆ ಬರುವಾಗ ತಮ್ಮ ಇಲಾಖೆಯ ಪ್ರಗತಿ ನೋಟವನ್ನು ಸರಿಯಾಗಿ ತರದೇ ಕೆಲವು ಕಾಮಗಾರಿಗಳ ಮಾಹಿತಿಯನ್ನು ಮುಚ್ಚಿಡುವ ಪ್ರಯತ್ನ ಮಾಡುತ್ತಿದ್ದಾರೆ. ಅತ್ತ ಇನ್ನೂ ಕೆಲವು ಅಧಿಕಾರಿಗಳು ಸರಿಯಾಗಿ ಸಭೆಗೆ ಹಾಜರಾಗದೇ ನೆಪ ಹೇಳಿಕೊಂಡು ತಮ್ಮ ಸಿಬ್ಬಂದಿಯನ್ನು ಸಭೆಗೆ ಕಳುಹಿಸುತ್ತಿದ್ದಾರೆ. ಹೀಗೆ ಬೇಜವಾಬ್ದಾರಿ ಮೆರೆದರೆ ಯಾವ ಅಭಿವೃದ್ಧಿಯ ನಿರೀಕ್ಷೆಯೂ ಸಾಧ್ಯವಿಲ್ಲ ಹೀಗಾಗಿ ಅಧಿಕಾರಿಗಳು ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಅಧಿಕಾರಿ ಬಿ. ಎಸ್. ಯಾದವಾಡ, ತೋಟಗಾರಿಕೆ ಇಲಾಖೆಯ ಕುಡ್ಡಣ್ಣನವರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.