ಬೆಳಗಾವಿ: ಪಂಚಮಸಾಲಿ ಲಿಂಗಾಯತ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ರಾಜ್ಯ ಸರ್ಕಾರಕ್ಕೆ ಡಿಸೆಂಬರ್ 19ರ ವರೆಗೆ ಗಡುವು ನೀಡಿದ್ದೇವೆ. ಮೀಸಲಾತಿ ಕೊಟ್ಟರೆ ವಿಜಯೋತ್ಸವ, ಇಲ್ಲದಿದ್ದರೆ ಡಿಸೆಂಬರ್ 22ರಂದು ಸುವರ್ಣವಿಧಾನ ಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಲಿಂಗಾಯತ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಎರಡು ವರ್ಷಗಳಿಂದ ಸುದೀರ್ಘ ಹೋರಾಟ ಮಾಡಿದ್ದೇವೆ. ಡಿಸೆಂಬರ್ 19 ರಂದು ಮೀಸಲಾತಿ ಘೋಷಣೆ ಮಾಡುವುದಾಗಿ ಸಿಎಂ ಬೊಮ್ಮಾಯಿ ಭರವಸೆ ನೀಡಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಮೀಸಲಾತಿ ಘೋಷಣೆ ಮಾಡುವ ಭರವಸೆ ಇದೆ. ಮುಖ್ಯಮಂತ್ರಿಗಳ ನಿಲುವು ನೋಡಿಕೊಂಡು ಹೋರಾಟ ಕೈಗೊಳ್ತೀವಿ. ಇದೇ ಡಿಸೆಂಬರ್ 22 ರಂದು ಸುವರ್ಣಸೌಧದ ಎದುರು ವಿರಾಟ್ ಪಂಚಶಕ್ತಿ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದರು.
ಪಂಚಮಸಾಲಿ ಸಮಾವೇಶ: ನಾಳೆ ಸವದತ್ತಿ ಮತಕ್ಷೇತ್ರದಲ್ಲಿ ಪಂಚಮಸಾಲಿ ಲಿಂಗಾಯತ ಮೀಸಲಾತಿ ಬೃಹತ್ ಸಮಾವೇಶ ಆಯೋಜಿಸಿದ್ದೇವೆ. ರಾಜ್ಯ ಸರ್ಕಾರ ಮೀಸಲಾತಿ ಕೊಟ್ಟರೆ ಯಾವ ರೀತಿ ವಿಜಯೋತ್ಸವ ಮಾಡಬೇಕು. ಮೀಸಲಾತಿ ಕೊಡದಿದ್ದರೆ ಯಾವ ರೀತಿ ಉಗ್ರ ಹೋರಾಟ ಮಾಡಬೇಕು ಎಂಬ ಸ್ಪಷ್ಟವಾದ ತೀರ್ಮಾನ ತೆಗೆದುಕೊಳ್ಳಿವೆ ಎಂದು ತಿಳಿಸಿದರು.
ಪಂಚಲಕ್ಷ ಪಾದಯಾತ್ರೆ: ಸವದತ್ತಿಯಿಂದ ಸುವರ್ಣ ವಿಧಾನಸೌಧವರೆಗೂ ಪಂಚಲಕ್ಷ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು. ಪಾದಯಾತ್ರೆ ಮೂಲಕ ಬಂದು ಸುವರ್ಣ ವಿಧಾನಸೌಧ ಮುತ್ತಿಗೆ ಹಾಕಲು ನಿರ್ಧರಿಸಿದ್ದೇವೆ. ನಾಳೆ ಸವದತ್ತಿ ಸಮಾವೇಶ ಸಂಜೆ 7 ಗಂಟೆಗೆ ಜರುಗಲಿದ್ದು, ಅಷ್ಟರೊಳಗೆ ರಾಜ್ಯ ಸರ್ಕಾರದ ನಿರ್ಧಾರ ಗೊತ್ತಾಗಲಿದೆ. ಸರ್ಕಾರದ ನಿರ್ಧಾರ ನೋಡಿಕೊಂಡು ಹೋರಾಟದ ರೂಪುರೇಷೆ ತಯಾರಿಸ್ತೀವಿ ಎಂದು ಮಾಹಿತಿ ನೀಡಿದರು.
ಪಂಚಮಸಾಲಿ ಶಕ್ತಿ ಪ್ರದರ್ಶನ: ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಸವದತ್ತಿ ಸಮಾವೇಶ ಹಮ್ಮಿಕೊಂಡಿದ್ದೇವೆ. ಸುವರ್ಣ ಸೌಧದೆದರು ವಿರಾಟ್ ಸಮಾವೇಶಕ್ಕೂ ನೂರು ಎಕರೆ ಪ್ರದೇಶದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಯಡಿಯೂರಪ್ಪನವರು ಕೊಟ್ಟ ಮಾತು ತಪ್ಪಿದ್ದಕ್ಕೆ ಬಾಗಲಕೋಟದಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡಿ ಬಿಸಿ ಮುಟ್ಟಿಸಿದ್ದೇವೆ. ಅಂತಿಮವಾದ ಹೋರಾಟ ನಡೆಸಲು ನಾವು ಸನ್ನದ್ಧರಾಗಿದ್ದು, ಅಹೋರಾತ್ರಿ ಹೋರಾಟಕ್ಕಾಗಿ ಬಸವನಗೌಡ ಪಾಟೀಲ್ ಅವರಿಗೂ ಆಹ್ವಾನ ನೀಡಿದ್ದೇವೆ ಎಂದು ಅಭಿಪ್ರಾಯ ತಿಳಿಸಿದರು.
ಇದನ್ನೂಓದಿ:ಬೆಳಗಾವಿಗೆ ಭೇಟಿ ನೀಡುವುದಾಗಿ ಶಿವಸೇನೆ ಸಂಸದ ಧೈರ್ಯಶೀಲ ಮಾನೆ ಪತ್ರ