ಬೆಳಗಾವಿ: ಹಳೇ ವೈಷ್ಯಮ್ಯ ಹಿನ್ನಲೆ 15 ಜನರ ಗುಂಪೊಂದು ಮಾಜಿ ಯೋಧ ಸೇರಿದಂತೆ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೈಲಹೊಂಗಲ ತಾಲೂಕಿನ ಚಿಕ್ಕನಂದಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಘಟನೆಯಲ್ಲಿ ಅಶೋಕ್ ಪಾಟೀಲ್, ಶಿವನಗೌಡ ಪಾಟೀಲ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೈಲಹೊಂಗಲ ತಾಲೂಕಿನ ಚಿಕ್ಕನಂದಿಹಳ್ಳಿ ಗ್ರಾಮದ ನಿವಾಸಿಗಳಾದ ಉಳಪ್ಪ ಮುಕಾಶಿ, ಅಶೋಕ್ ಮುಕಾಶಿ, ಮಡಿವಾಳ ಮುಕಾಶಿ, ಅಶೋಕ್ ಸೇರಿದಂತೆ 15 ಜನರು ಇಬ್ಬರ ಮೇಲೆ ಏಕಾಏಕಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ನಿನ್ನೆ ಸಂಜೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಅಶೋಕ್ ಪಾಟೀಲ್, ಶಿವನಗೌಡ ಪಾಟೀಲ್ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ನಿರಂತರ ಕಿರುಕುಳ ಸಂಬಂಧ ಹಲವು ಸಲ ದೂರು ನೀಡಿದ್ದರೂ ಸಂಬಂಧಪಟ್ಟ ಪೊಲೀಸರು ಮಾತ್ರ ಕ್ಯಾರೆ ಅನ್ನುತ್ತಿಲ್ಲ ಎಂದು ಮಾಜಿ ಯೋಧ ಅಶೋಕ್ ಅವರ ಪುತ್ರ ಬಬಲು ಆರೋಪಿಸಿದ್ದಾರೆ.
ಕಿತ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.