ಅಥಣಿ : ಕೈ-ಕಾಲು ಕಟ್ಟಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿರುವ ಘಟನೆ ಅಥಣಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ಮೃತನನ್ನು ತಾಲೂಕಿನ ದರೂರು ಗ್ರಾಮದ ಸಿದ್ಧಾರೂಢ ಶಿರಗುಪ್ಪಿ (25) ಎಂದು ಗುರುತಿಸಲಾಗಿದೆ. ಅಥಣಿ ಪಟ್ಟಣದ ಹೊರವಲಯದ ಗೋಕಾಕ್ ರಸ್ತೆಯ ಆರ್ಟಿಒ ಕಚೇರಿ ಬಳಿ ಕೈ-ಕಾಲು ಕಟ್ಟಿ ಮರಕ್ಕೆ ನೇತು ಹಾಕಿರುವ ಸ್ಥಿತಿಯಲ್ಲಿ ಈತನ ಶವ ಪತ್ತೆಯಾಗಿದೆ.
ಕೊಲೆಯಾದ ವ್ಯಕ್ತಿ ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಪರಪ್ಪ ಸವದಿ ಅವರ ಕಾರು ಚಾಲಕನಾಗಿದ್ದ. ಕಳೆದ ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಹಿಂದಿರುವಾಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗ್ತಿದೆ.
ಪರಪ್ಪ ಸವದಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಲಕ್ಷ್ಮಣ ಸವದಿ ಅವರ ಸಹೋದರ. ಕೊಲೆಯಾದ ಸಿದ್ದಾರೂಢ ಕಳೆದ ಒಂದು ತಿಂಗಳಿನಿಂದ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದು, ತನಿಖೆಯ ಬಳಿಕ ಸತ್ಯಾಸತ್ಯತೆ ತಿಳಿದು ಬರಬೇಕಿದೆ.
ಇದನ್ನೂ ಓದಿ: ಭೀಕರ ರಸ್ತೆ ಅಪಘಾತ : ಮೋರಿಗೆ ಕಾರು ಡಿಕ್ಕಿಯಾಗಿ ಐವರ ದುರ್ಮರಣ!