ಚಿಕ್ಕೋಡಿ: ಶಿಕ್ಷಕರು ಶಾಲಾ ಆವರಣದಲ್ಲಿ ಮಕ್ಕಳಿಗೆ ಮಾರ್ಗದರ್ಶನ ನೀಡಿದರೆ ಅಂತಹ ಶಿಕ್ಷಕರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಚಿಕ್ಕೋಡಿ ಡಿಡಿಪಿಐ ಗಜಾನನ ಮನ್ನಿಕೇರಿ, ಮುಖ್ಯೋಪಾಧ್ಯಯರಿಗೆ ಸೂಚನೆ ನೀಡಿದ್ದಾರೆ.
ಚಿಕ್ಕೋಡಿ ಡಿಡಿಪಿಐ ಕಚೇರಿಯಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಕೊರೊನಾ ಮಹಾಮಾರಿ ದೇಶವ್ಯಾಪಿ ಹಬ್ಬಿದ್ದು, ಇದರಿಂದ ಶಾಲಾ - ಕಾಲೇಜುಗಳಿಗೆ ಸರ್ಕಾರ ರಜೆ ಘೋಷಿಸಿದೆ. ಆದರೆ, ಮಕ್ಕಳ ಅನುಕೂಲಕ್ಕಾಗಿ ಕರ್ನಾಟಕ ಸರ್ಕಾರ ವಿದ್ಯಾಗಮ ಯೋಜನೆ ಜಾರಿಗೊಳಿಸಿದ್ದು, ಶಿಕ್ಷಕರು ಮಕ್ಕಳಿರುವ ಸ್ಥಳಗಳಿಗೆ ಹೋಗಿ ಮಾರ್ಗದರ್ಶನ ನೀಡಬೇಕು. ಕೇವಲ ನಾಲ್ಕೈದು ಮಕ್ಕಳಿಗೆ ಮಾತ್ರ ಶಿಕ್ಷಣ ನೀಡುವಂತದ್ದು. ಮಕ್ಕಳು ಮುಂಜಾಗೃತವಾಗಿ ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಯ್ದುಕೊಂಡು ದೇವಸ್ಥಾನದ ಪ್ರಾಂಗಣ, ಸರ್ಕಾರಿ ಖಾಲಿ ಜಾಗದಲ್ಲಿ ಮಕ್ಕಳಿಗೆ ಶಿಕ್ಷಕರು ಮಾರ್ಗದರ್ಶನ ನೀಡಬೇಕು. ಯಾವುದೇ ಕಾರಣಕ್ಕೂ ಶಾಲೆಯ ಆಟದ ಮೈದಾನದಲ್ಲಿ ಹಾಗೂ ಶಾಲೆಯ ಕೊಠಡಿಗಳಲ್ಲಿ ಈ ವಿದ್ಯಾಗಮ ಯೋಜನೆಯನ್ನು ಬಳಸುವಂತಿಲ್ಲ. ಒಂದು ವೇಳೆ ಶಿಕ್ಷಕರು ಶಾಲಾ ಆವರಣದಲ್ಲಿ ಮಕ್ಕಳಿಗೆ ಮಾರ್ಗದರ್ಶನ ನೀಡಿದರೆ ಅಂತಹ ಶಿಕ್ಷಕರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಅವರು ಸೂಚನೆ ನೀಡಿದ್ದಾರೆ.
ಶಿಕ್ಷಕರು ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಮಾರ್ಗದರ್ಶನ ಮಾಡಿ ಒಂದು ವಾರದವರೆಗೆ ಹೋಂ ವರ್ಕ್ ಕೊಟ್ಟು ಸ್ಟಡಿ ಮಟಿರಿಯಲ್ ನೀಡಬೇಕು. ಎರಡನೇ ಸುತ್ತಿನಲ್ಲಿ ನಾಲ್ಕು ದಿನ ಇಲ್ಲವೇ ಒಂದು ವಾರದ ಬಳಿಕ ಕೊಟ್ಟ ಹೊಂ ವರ್ಕ್ ಚೆಕ್ ಮಾಡಬೇಕು. ಮಕ್ಕಳ ಕಲಿಕಾ ಪ್ರಗತಿಯನ್ನು ದಾಖಲು ಮಾಡಿಕೊಂಡು ಶಿಕ್ಷಕರು ಬರುತ್ತಾರೆ ಎಂದರು.
ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಚಂದನ ವಾಹಿನಿಯಲ್ಲಿ ವಿಷಯವಾರು ಪಾಠಗಳು ಪ್ರಾರಂಭವಾಗಿವೆ. ಯಾವ ವಿದ್ಯಾರ್ಥಿಗಳ ಮನೆಯಲ್ಲಿ ಟಿವಿ ವ್ಯವಸ್ಥೆ ಇಲ್ಲವೋ ಅಂತಹ ವಿದ್ಯಾರ್ಥಿಗಳು ಶಾಲೆಯನ್ನು ಹೊರತುಪಡಿಸಿ ಗ್ರಾಮ ಪಂಚಾಯತಿ, ಸಮೂದಾಯ ಭವನಗಳಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸಿಕೊಂಡು ಟಿವಿ ವ್ಯವಸ್ಥೆ ಮಾಡಿ ಚಂದನ ವಾಹಿನಿ ವೀಕ್ಷಿಸುವ ವ್ಯವಸ್ಥೆಯನ್ನು ವಿದ್ಯಾರ್ಥಿಗಳಿಗೆ ಮಾಡಿಕೊಡಲಾಗಿದೆ. ಕಲಿಕೆಯಿಂದ ದೂರ ಉಳಿಯಬಾರದೆಂಬ ಉದ್ದೇಶದಿಂದ ಸರ್ಕಾರ ವಿದ್ಯಾಗಮ ಹಾಗೂ ಚಂದನ ವಾಹಿನಿ ಮೂಲಕ ಪಾಠ ಭೋದನೆ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಹೇಳಿದರು.