ಅಥಣಿ : ತಾಲೂಕಿನ ಕೋಕಟನೂರ ಮತ್ತು ಗದಗನ ಪಶು ವೈದ್ಯಕೀಯ ಮಹಾವಿದ್ಯಾಲಯಗಳ ಶೈಕ್ಷಣಿಕ ಮತ್ತು ಆರ್ಥಿಕ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಡಿಸಿಎಂ ಮತ್ತು ಸಾರಿಗೆ ಸಚಿವರಾದ ಲಕ್ಷ್ಮಣ್ ಸವದಿ ಅವರ ನೇತೃತ್ವದಲ್ಲಿ ಇಂದು ವಿಕಾಸಸೌಧದ ಅವರ ಕಚೇರಿಯಲ್ಲಿ ಸಭೆ ನಡೆದಿದೆ.
ಈ ಸಭೆಯಲ್ಲಿ ಪಶುಸಂಗೋಪನೆ ಸಚಿವ ಪ್ರಭು ಚೌಹಾಣ್ ಮತ್ತು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಸಂಪರ್ಕ ಸಚಿವರಾದ ಸಿ.ಸಿ. ಪಾಟೀಲ್ ಅವರು ಕೂಡ ಭಾಗವಹಿಸಿದ್ದರು. ಪಶುವೈದ್ಯಕೀಯ ವಿಶ್ವವಿದ್ಯಾಲಯದ ಕುಲಪತಿಗಳು ಸೇರಿ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಅಥಣಿ ಮತ್ತು ಗದಗನಲ್ಲಿ ಪಶು ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಬಾಕಿ ಇರುವ ಯೋಜನೆಗಳನ್ನು ತ್ವರಿತಗತಿಯಲ್ಲಿ ಮುಗಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲು ಕೂಡಲೇ ಕಾರ್ಯಪ್ರವೃತ್ತರಾಗುವಂತೆ ಸವದಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಕೋಕಟನೂರ ಪಶು ವೈದ್ಯಕೀಯ ಮಹಾವಿದ್ಯಾಲಯ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ ಮತ್ತು ಕೋನೆಯ ಹಂತದಲ್ಲಿ ಕಾಮಗಾರಿ ಇರುವುದರಿಂದ ಈ ಸಭೆಯಿಂದ ಅಥಣಿ ಜನತೆ ನಿರೀಕ್ಷೆ ಮತ್ತೆ ಗರಿಗೆದರಿದೆ.