ಬೆಳಗಾವಿ: ಬಿಮ್ಸ್ನಲ್ಲಿ ಯಾವ ವ್ಯವಸ್ಥೆಯು ಸರಿಯಾಗಿಲ್ಲ. ನಾನು ಆಸ್ಪತ್ರೆಗೆ ಬಂದಿದ್ದೇನೋ ಅಥವಾ ಜಾತ್ರೆಗೆ ಬಂದಿದ್ದೀನೋ ಅನಿಸುತ್ತಿದೆ. ಜನರ ಹಿತದೃಷ್ಟಿಯಿಂದ ಈ ಅವ್ಯವಸ್ಥೆಯನ್ನು ತುರ್ತಾಗಿ ಸರಿ ಮಾಡಬೇಕಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.
ನಗರದಲ್ಲಿ ಸಿಎಂ ಯಡಿಯೂರಪ್ಪ ವರ್ಚುವಲ್ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಲ್ಕೈದು ದಿನಗಳಲ್ಲಿ ಬೆಳಗಾವಿ ಜಿಲ್ಲೆಗೆ ಸಿಎಂ ಯಡಿಯೂರಪ್ಪ ಬರ್ತಾರೆ. ಇಂದು ಸಂಜೆ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಜಿಲ್ಲೆಯಲ್ಲಿನ ವ್ಯವಸ್ಥೆ ಬಗ್ಗೆ ವಿವರಿಸುವ ಮೂಲಕ ಬೆಳಗಾವಿ ಜಿಲ್ಲೆಯಲ್ಲಿ ಆಗಿರುವ ತೊಂದರೆಗಳನ್ನು ಸಿಎಂ ಗಮನಕ್ಕೆ ತರುತ್ತೇನೆ ಎಂದರು.
ಇಂದು ಬೆಳಗ್ಗೆ ಬಿಮ್ಸ್ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಕೊರೊನಾ ಸೋಂಕಿತರನ್ನು ಮಾತನಾಡಿಸಿದ್ದೇನೆ. ಆದ್ರೆ, ಇಲ್ಲಿ ವ್ಯವಸ್ಥೆ ಸರಿಯಾಗಿಲ್ಲ. ತುರ್ತಾಗಿ ಸರಿ ಮಾಡುತ್ತೇನೆ. ಇದಲ್ಲದೇ ಬಿಮ್ಸ್ ಆಸ್ಪತ್ರೆಯಲ್ಲಿರುವ ಐಸಿಯು ವಾರ್ಡ್ ಸರಿ ಇಲ್ಲ. ಕೆಲವರು ಬಟ್ಟೆ ಬರೆಗಳನ್ನಿಟ್ಟುಕೊಂಡು ಐಸಿಯುನಲ್ಲಿ ಕುಳಿತಿದ್ದಾರೆ. ಹೀಗಾಗಿ ಬಿಮ್ಸ್ನಲ್ಲಿ ಪ್ರತಿಯೊಂದು ವಾರ್ಡ್ನಲ್ಲಿ ಸಿಸಿಟಿವಿ ಹಾಕುತ್ತೇವೆ. ನಾಲ್ಕು ಶಿಫ್ಟ್ನಲ್ಲಿ ವೈದ್ಯರು ಕೆಲಸ ಮಾಡುವಂತೆ ಹೇಳುತ್ತೇನೆ ಎಂದರು.
ಕೋವಿಡ್ ನಿರ್ವಹಣೆಯಲ್ಲಿ ಜಿಲ್ಲಾಡಳಿತದ ಕೋ-ಆರ್ಡಿನೇಷನ್ ಸರಿ ಇಲ್ಲ. ಆದಷ್ಟು ಬೇಗ ಬಿಮ್ಸ್ ಆಸ್ಪತ್ರೆ ದುರಾವಸ್ಥೆಯನ್ನ ಸರಿಪಡಿಸುತ್ತೇವೆ. ಅಧಿಕಾರಿಗಳು ತಮ್ಮದೇ ಲೋಕದಲ್ಲಿ ತೇಲಾಡುತ್ತಿದ್ದಾರೆ. ಆ ಲೋಕದಿಂದ ಕೆಳಗಿಳಿಸುವ ಕೆಲಸ ಮಾಡುತ್ತೇನೆ. ಆ ನಿಟ್ಟಿನಲ್ಲಿ ಇವತ್ತು ಬಿಮ್ಸ್ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.
ಸಾಮಾನ್ಯ ವ್ಯಕ್ತಿಯಾಗಿ ಕೈಮುಗಿದು ಹೇಳುತ್ತೇನೆ. ಮಾನವ ಧರ್ಮದ ಆಧಾರದ ಮೇಲೆ ಜನರ ಪ್ರಾಣರಕ್ಷಣೆಗೆ ವೈದ್ಯರು ಮುಂದಾಗಬೇಕು
ಬಿಮ್ಸ್ನಲ್ಲಿ ಆಂತರಿಕವಾಗಿ ಯಾವುದೇ ಆಡಳಿತಾತ್ಮಕ ಸಮಸ್ಯೆಗಳಿದ್ದರೆ ನಾಲ್ಕೈದು ದಿನಗಳಲ್ಲಿ ಬಗೆಹರಿಸಿಕೊಂಡು ಜನರಿಗೆ ಉತ್ತಮ ಚಿಕಿತ್ಸೆಯನ್ನು ನೀಡಬೇಕು. ಒಂದು ವೇಳೆ ಪರಿಸ್ಥಿತಿ ಸುಧಾರಣೆಯಾಗದಿದ್ದರೆ ಬೇರೆ ರೀತಿಯ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಎಚ್ಚರಿಕೆ ನೀಡಿದರು.
ಕೋವಿಡ್ ಸೋಂಕಿನಿಂದ ಸಾವು-ಬದುಕಿನ ಮಧ್ಯೆ ಸೆಣಸಾಡುತ್ತಿರುವ ಜನರು ಬಿಮ್ಸ್ಗೆ ದಾಖಲಾಗುತ್ತಾರೆ. ಅವರಿಗೆ ಸರಿಯಾದ ಚಿಕಿತ್ಸೆ ನೀಡದಿದ್ದರೆ ಅಂತಹವರ ಶಾಪ ನಮ್ಮೆಲ್ಲರಿಗೂ ತಟ್ಟುತ್ತದೆ. ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದ್ದರೂ ಸರಿಯಾದ ಚಿಕಿತ್ಸೆ ನೀಡದಿದ್ದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು.
ವೈದ್ಯಕೀಯ ಮನೋಧರ್ಮ ಮರೆಯಬೇಡಿ:
ಆತಂಕದಲ್ಲಿ ಇರುವ ರೋಗಿಗಳನ್ನು ಮಾತನಾಡಿಸಿ ಅವರ ಮನೋಬಲವನ್ನು ಹೆಚ್ಚಿಸುವುದು ವೈದ್ಯಕೀಯ ಮನೋಧರ್ಮ. ಎಲ್ಲರೂ ವೈದ್ಯಕೀಯ ಮನೋಧರ್ಮ ಪ್ರದರ್ಶಿಸುವ ಮೂಲಕ ರೋಗಿಗಳ ಪ್ರಾಣರಕ್ಷಿಸಬೇಕು.ಜಿಲ್ಲೆಯ ಸಾಮಾನ್ಯ ವ್ಯಕ್ತಿಯಾಗಿ ಹೀಗೆ ಕೈಮುಗಿದು ಹೇಳುತ್ತೇನೆ. ಜನರ ಪ್ರಾಣರಕ್ಷಣೆಗೆ ವೈದ್ಯರು ಮುಂದಾಗಬೇಕು ಎಂದರು.
ಇದಲ್ಲದೇ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದಿನ ಸಭೆಯಲ್ಲಿ ಬೀಮ್ಸ್ ಸುಧಾರಣೆ ಬಗ್ಗೆ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದು, ಮುಂಬರುವ ನಾಲ್ಕೈದು ದಿನಗಳನ್ನು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಸಲಹೆ ನೀಡಲಾಗಿದೆ.ಅಧಿಕಾರಿಗಳು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.ಈಗಿನ ಪರಿಸ್ಥಿತಿಯಲ್ಲಿ ಮಾನವೀಯತೆ ಹಾಗೂ ಮಾನವ ಧರ್ಮದ ಆಧಾರದ ಮೇಲೆ ಕೆಲಸ ಮಾಡುವಂತೆ ಕೈಮುಗಿದು ಹೇಳಿದ್ದೇನೆ.ಒಂದು ವೇಳೆ ಸುಧಾರಣೆ ಆಗದಿದ್ರೆ ಮಂದೆ ಏನು ಮಾಡಬೇಕು ಎಂಬುವುದನ್ನು ಚಿಂತನೆ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸಭೆಯಲ್ಲಿ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ್ ಬೆನಕೆ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ ಇದ್ದರು.