ಬೆಳಗಾವಿ: ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ಕೈಬಿಟ್ಟು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾನೂನು ಒಪ್ಪಿಕೊಳ್ಳಿ ಎಂದು ಡಿಸಿಎಂ ಗೋವಿಂದ ಕಾರಜೋಳ ರೈತರಿಗೆ ಕೈ ಮುಗಿದು ಪ್ರಾರ್ಥನೆ ಮಾಡಿಕೊಂಡರು.
ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಬಿಎಸ್‌ವೈ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಪದೇ ಪದೇ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ವಿಷಯ ಬಿಟ್ಟು ಮತ್ತೇನಾದರೂ ಪ್ರಶ್ನೆ ಇದ್ದರೆ ಕೇಳಿ. ಯತ್ನಾಳ್ಗೆ ಭಗವಂತ ಒಳ್ಳೆಯದನ್ನು ಮಾಡಲಿ ಎಂದರು.
ಕೃಷಿ ಮಸೂದೆ ವಾಪಸ್‌ಗೆ ಆಗ್ರಹಿಸಿ ದೆಹಲಿಯಲ್ಲಿ ರೈತರ ಪ್ರತಿಭಟನೆ ವಿಚಾರ ಕುರಿತಂತೆ ಪ್ರತಿಕ್ರಿಯಿಸಿ, ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ಕೈಬಿಟ್ಟು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾನೂನು ಒಪ್ಪಿಕೊಳ್ಳಬೇಕು. ರೈತರ ಹಿತಾಸಕ್ತಿಗೆ ವಿರುದ್ಧವಾದರೆ ಕೃಷಿ ಕಾನೂನು ಬದಲಾಯಿಸಲು ಅವಕಾಶವಿದೆ. ನಾವು ಈ ಹಿಂದೆ ಅನೇಕ ಬಾರಿ ಕಾನೂನು ಬದಲಾಯಿಸಿದ್ದೇವೆ. ಹಾಗೇನಾದರೂ ರೈತರಿಗೆ ವಿರುದ್ಧವಾಗಿದ್ದರೆ ಈ ಕಾನೂನನ್ನು ಬದಲಾಯಿಸುತ್ತೇವೆ ಎಂದು ತಿಳಿಸಿದರು.
ದೆಹಲಿಯಲ್ಲಿ ರೈತರು ಮೊಂಡತನದ ಹೋರಾಟ ಬಿಡಬೇಕು. ಕರ್ನಾಟಕದಲ್ಲಿ ನಮ್ಮ ಊರಲ್ಲಿ, ನಿಮ್ಮ ಊರಲ್ಲಿ ಹೋರಾಟ ಇಲ್ಲ. ದೆಹಲಿ ಸುತ್ತಮುತ್ತ ಹರಿಯಾಣ, ಪಂಜಾಬಿನವರಿಂದ ಮಾತ್ರ ಹೋರಾಟ ಮಾಡಲಾಗುತ್ತಿದೆ. ಇದರಿಂದ ಸಂಶಯ ವ್ಯಕ್ತವಾಗುತ್ತಿದೆ. ರೈತರ ಬಗ್ಗೆ ಕೆಟ್ಟದಾಗಿ ಹೇಳಲು ತಯಾರಿಲ್ಲ. ಸರ್ಕಾರದೊಂದಿಗೆ ಸಹಕರಿಸಿ ಕಾನೂನು ಒಪ್ಪಿಕೊಳ್ಳಿ, ಕಾನೂನಿಂದ ರೈತರಿಗೆ ಧಕ್ಕೆ ಆದರೆ ಅದನ್ನು ಬದಲಾವಣೆ ಮಾಡುತ್ತೇವೆ ಎಂದರು.
ಓದಿ: ಪಲ್ಸ್ ಪೋಲಿಯೋ ಅಭಿಯಾನ.. ವಸಂತನಗರದಲ್ಲಿ ಚಾಲನೆ ನೀಡಿದ ಬಿಬಿಎಂಪಿ ಆಯುಕ್ತ..!
2024ರವರೆಗೆ ಕೃಷಿ ಮಸೂದೆ ಜಾರಿ ಬೇಡ ಎಂಬ ರೈತ ಮುಖಂಡರ ಮನವಿ ಕುರಿತಂತೆ ಪ್ರತಿಕ್ರಿಯಿಸಿ, 2024ರವರೆಗೂ ಕಾನೂನು ಏಕೆ ತಡೆ ಹಿಡಿಯಬೇಕು, ಕಾರಣ ಏನು, ರೈತರ ಆದಾಯ ದ್ವಿಗುಣಗೊಳಿಸೋದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ. ರೈತರಿಗೆ ನೆರವಾಗುವಂತಹ ಕಾನೂನನ್ನು ಪ್ರಧಾನಿ ಮೋದಿ ತಂದಿದ್ದಾರೆ ಎಂದು ಡಿಸಿಎಂ ಕಾರಜೋಳ ಸಮರ್ಥಿಸಿಕೊಂಡರು.
ನಾಳಿನ ಕೇಂದ್ರ ಸರ್ಕಾರದ ಬಜೆಟ್ ವಿಚಾರದ ಕುರಿತು ಮಾತನಾಡಿದ ಡಿಸಿಎಂ, ರಾಜ್ಯಕ್ಕೆ ಜಿಎಸ್‌ಟಿ ಪಾಲು ಬರುತ್ತಾ ಇಲ್ಲ ಅಂತ ಏನೂ ಇಲ್ಲ. ಕಳೆದ ಡಿಸೆಂಬರ್ -ಜನವರಿಯಿಂದ ಆದಾಯ, ವ್ಯಾಪಾರ-ವಹಿವಾಟು ಕಡಿಮೆ ಆಗಿದೆ. ಜಿಎಸ್‌ಟಿ ಒಂದೇ ಅಲ್ಲ. ಇನ್‌ಕಮ್ ಟ್ಯಾಕ್ಸ್ ಕಡಿಮೆ ಆಗಿದೆ. ರಾಜ್ಯ ಮಟ್ಟದಲ್ಲಿ ಮೋಟಾರ್ ವೆಹಿಕಲ್ ಟ್ಯಾಕ್ಸ್ ಕಡಿಮೆ ಆಗಿದೆ. ಅನೇಕ ವಿಧಗಳಲ್ಲಿ ನಮಗೆ ಬರಬೇಕಾದ ನಿರೀಕ್ಷೆಯ ಆದಾಯ ಬರಲಿಲ್ಲ ಎಂದರು.