ಬೆಳಗಾವಿ/ಬೆಂಗಳೂರು: ರಾಜ್ಯದಲ್ಲಿ ಬರಗಾಲದ ಹಿನ್ನೆಲೆಯಲ್ಲಿ ಮೋಡ ಬಿತ್ತನೆ ಮಾಡುವ ಬಗ್ಗೆ ಸಕಾರಾತ್ಮಕ ನಿಲುವು ಹೊಂದಿರುವುದಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು. ವಿಧಾನಸಭೆಯ ಶೂನ್ಯ ವೇಳೆಯಲ್ಲಿ ಇಂದು ಮಾತನಾಡಿದ ಅವರು, "ಶಾಸಕ ಪ್ರಕಾಶ್ ಕೋಳಿವಾಡ ಅವರು ಮೋಡ ಬಿತ್ತನೆ ಮಾಡುವ ನಿಟ್ಟಿನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಮೋಡ ಬಿತ್ತನೆ ಮಾಡುವ ಕಂಪನಿಗಳ ಜೊತೆ ಈಗಾಗಲೇ ಮಾತುಕತೆ ನಡೆಸಿದ್ದಾರೆ. ಸ್ವಂತ ಖರ್ಚಿನಲ್ಲಿ ಮೋಡ ಬಿತ್ತನೆ ಮಾಡಲು ಕೂಡ ಅವರು ಆಸಕ್ತಿ ತೋರಿಸಿದ್ದಾರೆ. ಜನರಿಗೆ ಒಳ್ಳೆಯದನ್ನು ಮಾಡಬೇಕೆನ್ನುವ ಅವರ ಆಸಕ್ತಿ ಶ್ಲಾಘನೀಯ. ನಾನು ಕೂಡ ಮೋಡ ಬಿತ್ತನೆಯ ಪರವಾಗಿದ್ದೇನೆ. ಆದರೆ, ಕೆಲವು ತಾಂತ್ರಿಕ ತೊಂದರೆಗಳಿವೆ" ಎಂದರು.
"ಟೆಂಡರ್ ಕರೆಯುವುದೂ ಸೇರಿದಂತೆ ಹಲವಾರು ಪ್ರಕ್ರಿಯೆಗಳನ್ನು ಅನುಸರಿಸಬೇಕು. ಆದರೂ ತಾವು ಹಣಕಾಸು ಇಲಾಖೆಯ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ಯಾವ ರೀತಿ ನೆರವು ನೀಡಬಹುದೆಂಬುದನ್ನು ಪರಿಶೀಲಿಸುತ್ತೇನೆ. ಮೋಡ ಬಿತ್ತನೆಯನ್ನು ಈಗಾಗಲೇ ಹಲವು ರಾಜ್ಯಗಳು ಜಾರಿಗೊಳಿಸಿವೆ. ರಾಜ್ಯದಲ್ಲಿ ಇಂದಿನಿಂದ ನಾಲ್ಕು ದಿನಗಳ ಕಾಲ ಇರುವ ಮೋಡಗಳ ಸದ್ಬಳಕೆಗಾಗಿ ಪ್ರಯತ್ನಿಸುವುದಾಗಿ" ಭರವಸೆ ನೀಡಿದರು. ಆಗ ಪ್ರಕಾಶ್ ಕೋಳಿವಾಡ ಅವರು ಮಾತನಾಡಿ, ಒಂದು ವೇಳೆ ಸರ್ಕಾರಕ್ಕೆ ನಿರ್ಧಾರ ತೆಗೆದುಕೊಳ್ಳಲು ವಿಳಂಬವಾಗುವುದಾದರೆ ಚಿಂತೆ ಇಲ್ಲ. ನನ್ನ ಸ್ವಂತ ಖರ್ಚಿನಲ್ಲೇ ಮೋಡ ಬಿತ್ತನೆ ಮಾಡಿಸುತ್ತೇನೆ. ಮುಖ್ಯ ಕಾರ್ಯದರ್ಶಿಯವರಿಂದ ಅನುಮತಿ ಕೊಡಿಸಿ ಎಂದು ಮನವಿ ಮಾಡಿದರು.
ಇದಕ್ಕೂ ಮೊದಲು, ಶಾಸಕ ಪ್ರಕಾಶ್ ಕೋಳಿವಾಡ ವಿಷಯ ಪ್ರಸ್ತಾಪಿಸಿ, ಇಂದಿನಿಂದ ಡಿಸೆಂಬರ್ 11 ರವರೆಗೂ ರಾಜ್ಯದಲ್ಲಿ ಮೋಡಗಳು ಹೆಚ್ಚಾಗಿವೆ. ಮೋಡ ಬಿತ್ತನೆ ಮಾಡಿದರೆ ಒಳ್ಳೆಯ ಫಲಿತಾಂಶ ಬರಲಿದೆ. ಮಳೆಯಾದರೆ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳು ಸುಧಾರಿಸುತ್ತವೆ. ಕಡಿಮೆ ಖರ್ಚಿನಲ್ಲಿ ಮೋಡ ಬಿತ್ತನೆಗೆ ಅವಕಾಶವಿದೆ. ಇದರ ಬಗ್ಗೆ ತಂತ್ರಜ್ಞರ ಜೊತೆ ತಾವು ಚರ್ಚೆ ಮಾಡಿದ್ದು, ಎಲ್ಲಾ ರೀತಿಯ ಸಿದ್ಧತೆಗಳೂ ಲಭ್ಯ ಇವೆ. ಸರ್ಕಾರ ಇಂದೇ ತೀರ್ಮಾನ ಮಾಡಿದರೆ ಮೋಡ ಬಿತ್ತನೆಯಾಗಲಿದೆ. ಜನರಿಗೆ ಅನುಕೂಲವಾಗಲಿದೆ ಎಂದು ಸದನದ ಗಮನ ಸೆಳೆದರು. ಇದಕ್ಕೆ ಶಾಸಕ ಕೋನರೆಡ್ಡಿ ಬೆಂಬಲ ವ್ಯಕ್ತಪಡಿಸಿದರು. ಆಗ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ಮೋಡ ಬಿತ್ತನೆ ಬಗ್ಗೆ ಉಪಮುಖ್ಯಮಂತ್ರಿಗಳು ಉತ್ತರಿಸುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ: ಪರಿಷತ್ನಲ್ಲಿ ಗ್ಯಾರಂಟಿ ಸ್ಕೀಮ್ಗೆ ಎಸ್ಸಿ-ಎಸ್ಟಿ ಹಣ ಬಳಕೆ ಗದ್ದಲ; ಬಿಜೆಪಿ, ಜೆಡಿಎಸ್ ಧರಣಿ