ಬೆಳಗಾವಿ: ಚುಚ್ಚುಮದ್ದು ಪಡೆದು ಜಿಲ್ಲೆಯ ರಾಮದುರ್ಗ ತಾಲೂಕಿನ ಮೂವರು ಮಕ್ಕಳು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ತನಿಖಾ ವರದಿಯನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾಹಿತಿ ನೀಡಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಾಥಮಿಕ ತನಿಖಾ ವರದಿಯನ್ನು ಸಿಎಂಗೆ ಕಳುಹಿಸಿ ಕೊಟ್ಟಿದ್ದೇವೆ. ಜಿಲ್ಲಾ ಲಸಿಕಾಕರಣ ಅನುಷ್ಠಾನ ಅಧಿಕಾರಿ ಡಾ.ಈಶ್ವರ್ ಗಡಾದ್ ಪರಿಶೀಲನೆ ನಡೆಸಿ, ವರದಿ ಕೊಟ್ಟಿದ್ದಾರೆ. ಟೆಕ್ನಿಕಲ್ ವರದಿ ಇರುವ ಕಾರಣ ಅದರಲ್ಲಿರುವ ಅಂಶಗಳನ್ನು ಬಹಿರಂಗ ಪಡಿಸಲು ಆಗುವುದಿಲ್ಲ. ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಸ್ಟಾಫ್ ನರ್ಸ್ ಅಮಾನತು ಮಾಡಲಾಗಿದೆ. ಪ್ರಕರಣದ ತನಿಖೆ ಮುಂದುವರೆದಿದೆ ಎಂದರು.
ವಯಲ್ ತಯಾರಿಸಿದ ಕಂಪನಿಗೆ ಲಸಿಕೆ ಮಾದರಿ ಕಳುಹಿಸಿ ಕೊಟ್ಟಿದ್ದೇವೆ. ಪ್ರಯೋಗಾಲಯಕ್ಕೂ ಸಹ ಆ ವಯಲ್‌ಗಳನ್ನು ಕಳುಹಿಸಿಕೊಡಲಾಗಿದೆ. ವರದಿ ಬಂದ ಮೇಲೆ ನಿಖರ ಕಾರಣ ಗೊತ್ತಾಗಲಿದೆ ಎಂದರು.
ಮೃತಪಟ್ಟ ಮಕ್ಕಳ ಕುಟುಂಬಗಳಿಗೆ ಪರಿಹಾರ ನೀಡುವ ವಿಚಾರ ಸಂಬಂಧ ಚರ್ಚಿಸಲಾಗುತ್ತಿದೆ. ಲಸಿಕಾಕರಣದ ವೇಳೆ ಮೃತಪಟ್ಟರೆ ಪರಿಹಾರ ನೀಡಲು ನಿಯಮ ಇಲ್ಲ. ಆದರೆ, ಸಿಎಂ ಪರಿಹಾರ ನಿಧಿಯಲ್ಲಿ ಪರಿಹಾರ ನೀಡಲು ಅವಕಾಶ ಇದೆ.
ಅದಕ್ಕೆ ಕೆಲವು ಮಾನದಂಡ ಇವೆ. ಪೋಷಕರ ಆರ್ಥಿಕ ಸ್ಥಿತಿ ಹೇಗಿದೆ ನೋಡಿಕೊಳ್ಳುತ್ತೇವೆ. ಜಂಟಿ ಕಾರ್ಯದರ್ಶಿಗೆ ಪರಿಹಾರ ನೀಡುವಂತೆ ಶಿಫಾರಸು ಮಾಡುತ್ತೇವೆ. ಸಾಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಿಗಿಂತಲೂ ಪ್ರಾಥಮಿಕವಾಗಿ ಇಬ್ಬರು ಸಿಬ್ಬಂದಿಯಿಂದ ತಪ್ಪಾಗಿದೆ. ಹೀಗಾಗಿ, ಸಿಬ್ಬಂದಿ ವಿರುದ್ಧವಷ್ಟೇ ಕ್ರಮ ವಹಿಸಿದ್ದೇವೆ ಎಂದು ಡಿಸಿ ಹೇಳಿದರು.
ಓದಿ: ಬೆಳಗಾವಿ ಮಕ್ಕಳ ಸಾವು ಪ್ರಕರಣ.. ಪ್ರಾಥಮಿಕ ಆರೋಗ್ಯ ಕೇಂದ್ರದ ಇಬ್ಬರು ಸಿಬ್ಬಂದಿ ಸಸ್ಪೆಂಡ್