ಬೆಳಗಾವಿ: ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಅಗತ್ಯವಿರುವ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಕಾರ್ಯ ಪ್ರವೃತ್ತರಾಗಿದ್ದಾರೆ.
ನಗರದ ಇಎಸ್ಐ ಆಸ್ಪತ್ರೆ, ಮಿಲಿಟರಿ ಆಸ್ಪತ್ರೆ ಹಾಗೂ ಕಂಟೈನ್‌ಮೆಂಟ್ ಪ್ರದೇಶದಲ್ಲಿರುವ ಆಸ್ಪತ್ರೆಗೆ ಭೇಟಿ ನೀಡಿ ಲಭ್ಯವಿರುವ ಹಾಸಿಗೆಗಳು ಹಾಗೂ ಇತರೆ ಮೂಲಸೌಕರ್ಯಗಳನ್ನು ಖುದ್ದಾಗಿ ಮಾಹಿತಿ ಸಂಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಬಂಧಿಸಿದ ಆಸ್ಪತ್ರೆಗಳ ಅಧಿಕಾರಿಗಳು ಮತ್ತು ವೈದ್ಯರ ಜೊತೆ ಸಮಾಲೋಚನೆ ನಡೆಸಿದ ಜಿಲ್ಲಾಧಿಕಾರಿಗಳು, ಸರ್ಕಾರದ ಮಾರ್ಗಸೂಚಿ ಪ್ರಕಾರ ಸೋಂಕಿತರಿಗೆ ಅಗತ್ಯವಿರುವ ಆರೈಕೆಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳುವಂತೆ ನಿರ್ದೇಶನ ನೀಡಿದರು.
ವೈದ್ಯಕೀಯ ಸಿಬ್ಬಂದಿಗೆ ಪ್ರತ್ಯೇಕ ಕೇರ್ ಸೆಂಟರ್:
ಕೊರೊನಾದಂತಹ ಸಾಂಕ್ರಾಮಿಕ ರೋಗದ ವಿರುದ್ಧ ನಾಲ್ಕೈದು ತಿಂಗಳಿಂದ ನಿರಂತರ ಹೋರಾಟ ನಡೆಸುತ್ತಿರುವ ವೈದ್ಯರು, ನರ್ಸ್ ಮತ್ತಿತರ ವೈದ್ಯಕೀಯ ಸಿಬ್ಬಂದಿಗೂ ಸೋಂಕು ತಗುಲುತ್ತಿರುವುದರಿಂದ ಅವರಿಗಾಗಿ ಪ್ರತ್ಯೇಕ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಲಾಗುತ್ತಿದೆ ಎಂದು ಡಿಸಿ ತಿಳಿಸಿದರು.
ಸುಮಾರು 40 ಹಾಸಿಗೆ ಸೌಲಭ್ಯ ಹೊಂದಿರುವ ನಗರದ ಕಂಟೈನ್‌ಮೆಂಟ್ ಪ್ರದೇಶದಲ್ಲಿರುವ ಆಸ್ಪತ್ರೆಯನ್ನು ಸೋಂಕಿತ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೆ ಮೀಸಲಿಡಲಾಗುವುದು. ಉಳಿದಂತೆ 25 ಹಾಸಿಗೆಗಳ ಇಎಸ್ಐ ಮತ್ತು 50 ಹಾಸಿಗೆಗಳ ವ್ಯವಸ್ಥೆ ಹೊಂದಿರುವ ಮಿಲಿಟರಿ ಆಸ್ಪತ್ರೆಗಳನ್ನು ಇತರೆ ಸೋಂಕಿತರ ಚಿಕಿತ್ಸೆಗೆ ಒದಗಿಸಲಾಗುತ್ತದೆ. ಮಿಲಿಟರಿ ಆಸ್ಪತ್ರೆಯ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿದ ಬಳಿಕ ಸೋಂಕಿತರನ್ನು ಇಲ್ಲಿ ಇರಿಸಲಾಗುವುದು ಎಂದು ತಿಳಿಸಿದರು.