ಬೆಳಗಾವಿ: ಬೆಳಗಾವಿಯ ದಂಡು ಮಂಡಳಿ ಸಿಇಒ ಕರ್ನಲ್ ಆನಂದ್ (40) ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ. ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿರುವ ಕೆ ಆನಂದ್ ಅವರ ಸರ್ಕಾರಿ ನಿವಾಸದಲ್ಲಿ ಮೃತದೇಹ ಪತ್ತೆಯಾಗಿದ್ದು, ಸ್ಥಳದಲ್ಲಿ ಡೆತ್ ನೋಟ್ ಕೂಡ ಕಂಡುಬಂದಿದೆ. ಕಳೆದ ಒಂದೂವರೆ ವರ್ಷಗಳಿಂದ ದಂಡು ಮಂಡಳಿ ಸಿಇಒ ಆಗಿ ಸೇವೆ ಸಲ್ಲಿಸುತ್ತಿರುವ ಆನಂದ್, ಇಂಡಿಯನ್ ಡಿಫೆನ್ಸ್ ಎಸ್ಟೇಟ್ ಸರ್ವಿಸ್ಗೆ ಸೇರಿದ್ದರು.
ಮೃತ ಆನಂದ ತಮಿಳುನಾಡು ಮೂಲದವರಾಗಿದ್ದು, ವಿವಾಹ ಆಗಿಲ್ಲ, ತಂದೆ-ತಾಯಿ ತಮಿಳುನಾಡಿನಲ್ಲಿದ್ದಾರೆ. ಬೆಳಗಾವಿಯ ಸರ್ಕಾರಿ ನಿವಾಸದಲ್ಲಿ ಒಬ್ಬರೆ ವಾಸವಾಗಿದ್ದರು. ಇಂದು ಬೆಳಗ್ಗೆ ಮನೆ ಬಾಗಿಲು ತೆರೆಯದೇ ಇದ್ದಾಗ ಅನುಮಾನಗೊಂಡ ಮನೆ ಸಿಬ್ಬಂದಿ ಕ್ಯಾಂಪ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಬಾಗಿಲು ಮುರಿದು ಒಳ ಪ್ರವೇಶಿಸಿದಾಗ ಶವ ಪತ್ತೆಯಾಗಿದೆ.
ಡೆತ್ ನೋಟ್ ಸಿಕ್ಕಿದೆ ಎಂದ ನಗರ ಪೊಲೀಸ್ ಆಯುಕ್ತ: 'ಆನಂದ ಅವರ ರೂಮ್ನಲ್ಲಿ ಡೆತ್ ನೋಟ್ ಸಿಕ್ಕಿದೆ. ಅದರಲ್ಲಿ ಯಾವೆಲ್ಲಾ ಅಂಶ ಇದೆ ಅನ್ನೋದನ್ನ ಪರಿಶೀಲನೆ ಮಾಡುತ್ತಿದ್ದೇವೆ' ಎಂದು ನಗರ ಪೊಲೀಸ್ ಆಯುಕ್ತ ಎಸ್.ಎನ್.ಸಿದ್ದರಾಮಪ್ಪ ತಿಳಿಸಿದರು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಆಯುಕ್ತರು, '2021ರಿಂದ ಬೆಳಗಾವಿಯ ದಂಡು ಮಂಡಳಿ ಸಿಇಒ ಆಗಿ ಕೆಲಸ ಮಾಡುತ್ತಿದ್ದರು. ಈಗ ಎರಡು ದಿನಗಳಿಂದ ಅವರ ಮನೆ ಬಾಗಿಲು ತೆರೆದಿರಲಿಲ್ಲ. ಇದರಿಂದ ಅನುಮಾನ ಬಂದು ನಮ್ಮ ಪೊಲೀಸರು, ಮದ್ರಾಸ್ನಲ್ಲಿರುವ ಆನಂದ ಅವರ ತಂದೆಗೆ ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ಬಳಿಕ ಬಾಗಿಲು ತೆರೆದು ನೋಡಿದಾಗ ಆನಂದ ಸಾವನ್ನಪ್ಪಿರುವುದು ತಿಳಿದು ಬಂದಿದೆ. ಮೂಗಿನಲ್ಲಿ ರಕ್ತ ಕೆಳಗೆ ಬಿದ್ದಿತ್ತು, ಹಾಸಿಗೆ ಪಕ್ಕದಲ್ಲಿ ಒಂದು ವಿಷದ ಬಾಟಲು ಸಿಕ್ಕಿದೆ. ಯಾವುದೋ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ' ಎಂದರು.
'ಬೆರಳಚ್ಚು ತಜ್ಞರು ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಎಲ್ಲ ಪರೀಕ್ಷೆ ಮಾಡಿದ್ದಾರೆ. 174 ವಿಧಿಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದು, ಎಫ್ಎಸ್ಎಲ್ ವರದಿ ಬಂದ ಬಳಿಕ ನಿಖರ ಮಾಹಿತಿ ತಿಳಿಯಲಿದೆ. ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅನ್ನೋದು ತನಿಖೆ ಬಳಿಕ ಗೊತ್ತಾಗುತ್ತದೆ. ದಂಡು ಮಂಡಳಿ ಸಿಬ್ಬಂದಿ ಹಾಗೂ ಕುಟುಂಬಸ್ಥರನ್ನ ವಿಚಾರಣೆ ಮಾಡುತ್ತೇವೆ' ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದರು.
ಇದಕ್ಕೂ ಮುನ್ನ ಸ್ಥಳಕ್ಕೆ ಎಂಎಲ್ಐಆರ್ಸಿ ಕಮಾಂಡೆಂಟ್ ಬ್ರಿಗೇಡಿಯರ್ ಜೋಯದೀಪ ಮುಖರ್ಜಿ, ಡಿಸಿಪಿ ರೋಹನ್ ಜಗದೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಡಿಸಿಪಿ ರೋಹನ್ ಜಗದೀಶ್, 'ಕರ್ನಲ್ ಆನಂದ್ ಅವರ ಸರ್ಕಾರಿ ನಿವಾಸದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಪೊಲೀಸ್ ಠಾಣೆಗೆ ಬಂದು ಮಾಹಿತಿ ನೀಡಿದ ಮೇಲೆ ತಪಾಸಣೆ ನಡೆಸಲಾಗುತ್ತಿದೆ. ಆನಂದ್ ಅವರ ಮೃತದೇಹವನ್ನು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗುವುದು. ವೈದ್ಯಕೀಯ ವರದಿ ಬಂದ ಬಳಿಕವೇ ಸಾವು ಹೇಗಾಗಿದೆ ಎಂಬುದು ಸ್ಪಷ್ಟವಾಗಲಿದೆ. ಕಳೆದ ಎರಡು ದಿನಗಳಿಂದ ಯಾರನ್ನೂ ಸಂಪರ್ಕಿಸದೆ, ನಿನ್ನೆ ಊಟವನ್ನೂ ತರಿಸಿಕೊಂಡಿಲ್ಲ. ಶುಕ್ರವಾರ ಮನೆಯ ಬಾಗಿಲು ತೆರೆದಿರಲಿಲ್ಲ. ಅವರ ಬಗ್ಗೆ ಸಂಶಯ ಇದೆ ಎಂದು ಇಲ್ಲಿ ಕೆಲಸ ಮಾಡುವ ಸಿಬ್ಬಂದಿ ಮಾಹಿತಿ ನೀಡಿದ ಮೇಲೆ ನಮ್ಮ ಸಿಬ್ಬಂದಿ ಅಲ್ಲಿ ಹೋಗಿ ನೋಡಿದ್ದಾರೆ. ಬಾಗಿಲು ಒಡೆದು ನೋಡಿದಾಗ ಆನಂದ್ ಶವವಾಗಿ ಪತ್ತೆಯಾಗಿದ್ದಾರೆ. ಆನಂದ್ ಮೊಬೈಲ್ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ವೈಜ್ಞಾನಿಕ ಆಧಾರದ ಮೇಲೆ ತನಿಖೆ ನಡೆಸಲಾಗುವುದು. ತಮಿಳುನಾಡಿನಲ್ಲಿರುವ ಆನಂದ್ ಅವರ ತಂದೆ-ತಾಯಿಗೆ ಮಾಹಿತಿ ತಿಳಿಸಿದ್ದೇವೆ' ಎಂದು ತಿಳಿಸಿದ್ದರು.
ಇದನ್ನೂ ಓದಿ: ಜಿಮ್ನಲ್ಲಿ ವ್ಯಾಯಾಮ ಮಾಡುತ್ತಿದ್ದ ಡಾಕ್ಟರ್ ಹಠಾತ್ ಹೃದಯಾಘಾತದಿಂದ ಸಾವು