ಬೆಳಗಾವಿ: ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಜಾಸ್ತಿಯಾಗಿದೆ. ಹೀಗಾಗಿ, ಜಿಲ್ಲೆಗೆ ಹೊರ ರಾಜ್ಯಗಳಿಂದ ಪ್ರವೇಶಿಸುವ ಎಲ್ಲಾ ಪ್ರಯಾಣಿಕರಿಗೆ ಕೋವಿಡ್ ತಪಾಸಣೆ ನಡೆಸಲಾಗುತ್ತಿದೆ.
ರೈಲು, ಬಸ್ ನಿಲ್ದಾಣಗಳಲ್ಲಿ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಬಾಚಿ ಗ್ರಾಮ ಸೇರಿದಂತೆ ಕಾಕತಿಯಲ್ಲಿರುವ ಚೆಕ್ಪೋಸ್ಟ್ಗಳಲ್ಲಿ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಅಲ್ಲದೆ ಹೊರ ರಾಜ್ಯದಿಂದ ಬರುವ ಪ್ರಯಾಣಿಕರನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಪರೀಕ್ಷೆಗೆ ಒಳಪಡಿಸಿ ನೆಗೆಟಿವ್ ಇದ್ದವರಿಗೆ ಮಾತ್ರ ಪ್ರವೇಶ ಕಲ್ಪಿಸುತ್ತಿದ್ದಾರೆ. ಒಂದು ವೇಳೆ ಪಾಸಿಟಿವ್ ಬಂದರೆ ಅಂತವರನ್ನು ಜಿಲ್ಲಾಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡುತ್ತಿದ್ದಾರೆ.
ಈ ಬಗ್ಗೆ ಡಿಸಿಪಿ ಚಂದ್ರಶೇಖರ್ ಆರ್.ನೀಲಗಾರ ಮಾತನಾಡಿ, ರಾಜ್ಯದ ಗಡಿಯಲ್ಲಿ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ. ಇದಕ್ಕಾಗಿ ರೈಲ್ವೆ, ಬಸ್ ನಿಲ್ದಾಣ, ಬಾಚಿ, ಕಾಕತಿಯಲ್ಲಿ ಚೆಕ್ ಪೋಸ್ಟ್ ತೆರೆಯಲಾಗಿದೆ. ಮಹಾರಾಷ್ಟ, ಗೋವಾದಿಂದ ಬರುವ ಎಲ್ಲಾ ಪ್ರಯಾಣಿಕರಿಗೆ ಕೋವಿಡ್ ಪರೀಕ್ಷೆ ಮಾಡುತ್ತಿದ್ದೇವೆ. ರಾಜ್ಯಕ್ಕೆ ಬರುವವರು ಕಡ್ಡಾಯವಾಗಿ ಪರೀಕ್ಷೆ ಮಾಡಿಸಿಕೊಂಡು ಆರ್ಟಿ-ಪಿಸಿಆರ್ ವರದಿ ತರಬೇಕು. ಒಂದು ವೇಳೆ ಅಲ್ಲಿ ಪರೀಕ್ಷೆ ಮಾಡಿಸದಿದ್ದರೆ ಇಲ್ಲಿ ಪರೀಕ್ಷೆ ಮಾಡುವುದು ಖಚಿತ. ಕೋವಿಡ್ ಸೋಂಕು ತಡೆಯಲು ಎಲ್ಲಾ ಕ್ರಮ ಕೈಗೊಳ್ಳುತ್ತಿದ್ದೇವೆ. ಪ್ರಯಾಣಿಕರು ವರದಿ ತರದಿದ್ದರೆ ಬಿಮ್ಸ್ಗೆ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: 55 ಕೋವಿಡ್ ಕೇರ್ ಸೆಂಟರ್, ತಾತ್ಕಾಲಿಕ ಲಸಿಕಾ ಕ್ಯಾಂಪ್ ಬಂದ್: ಬಿಬಿಎಂಪಿ ಆಯುಕ್ತ