ಬೆಳಗಾವಿ: ಕೋವಿಡ್ -19 ಹಿನ್ನೆಲೆ ಡಿಸೆಂಬರ್ 3ರಂದು ಕನಕದಾಸರ ಜಯಂತಿಯನ್ನು ಅತ್ಯಂತ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ತಿಳಿಸಿದರು.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಕನಕದಾಸರ 533ನೇ ಜಯಂತಿ ನಿಮಿತ್ತ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್ ಪಿಡುಗಿನ ಹಿನ್ನೆಲೆ ಸರ್ಕಾರ ಎಲ್ಲಾ ಮಹನೀಯರ ಜಯಂತಿಗಳನ್ನು ಅತಿ ಸರಳವಾಗಿ ಆಚರಿಸಲು ನಿರ್ಧರಿಸಿದೆ. ಎಲ್ಲಾ ತಾಲೂಕು ಕೇಂದ್ರಗಳಲ್ಲಿಯೂ ಕನಕದಾಸರ ಜಯಂತಿ ಆಚರಿಸಲು ತಿಳಿಸಲಾಗಿದೆ. ಪೂಜೆ, ಉಪನ್ಯಾಸ ಕಾರ್ಯಕ್ರಮಗಳು ಇರುತ್ತವೆ. ಆದರೆ ಮೆರವಣಿಗೆಗೆ ಅವಕಾಶ ಇರಲ್ಲ. ಕಡಿಮೆ ಸಂಖ್ಯೆಯಲ್ಲಿ ಸಮಾಜ ಬಾಂಧವರು ಭಾಗಿಯಾಗಬೇಕು ಎಂದು ಮನವಿ ಮಾಡಿದರು.
ಈ ವೇಳೆ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಡಿಸಿಪಿ ಸಿ.ಆರ್.ನೀಲಗಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಕುರುಬ ಸಮಾಜದ ಮುಖಂಡರಾದ ರೇಖಾ ದಳವಾಯಿ ಉಪಸ್ಥಿತರಿದ್ದರು.