ಬೆಳಗಾವಿ: ವ್ಯಕ್ತಿಯೊಬ್ಬರು ತಮ್ಮ ಮದುವೆ ಆಮಂತ್ರಣ ಪತ್ರವನ್ನು ವಿಭಿನ್ನವಾಗಿ ಕೊಡಲು ಮುಂದಾಗಿದ್ದು, ಫ್ಲೈಟ್ ಪಾಸ್‌ಪೋರ್ಟ್ ಹೋಲುವ ಆಮಂತ್ರಣ ಪತ್ರಿಕೆ ನೀಡಿದ್ದಾರೆ.
ನಗರದ ಆನಗೋಳ ಗ್ರಾಮದ ಯುವಕ ಧರ್ಮರಾಜ ತನ್ನ ಮದುವೆಗೆ ಬರುವ ಸಂಬಂಧಿಕರು, ಗೆಳೆಯ-ಗೆಳತಿಯರು ಹಾಗೂ ಹಿತೈಷಿಗಳನ್ನು ವಿಶಿಷ್ಟವಾಗಿ ಆಮಂತ್ರಣ ಮಾಡಿಕೊಳ್ಳಬೇಕೆಂದು ಪ್ಲಾನ್ ಮಾಡಿಕೊಂಡಿದ್ದರು. ಅದಕ್ಕಾಗಿ ಹಲವು ಬಗೆಯ ಆಮಂತ್ರಣ ಪತ್ರಿಕೆಗಳನ್ನು ಪರಿಶೀಲನೆ ನಡೆಸಿದ್ದರು.
ಆದ್ರೆ, ಇವರಿಗೆ ಅದ್ಯಾವದೂ ಸರಿ ಆಗದ ಹಿನ್ನೆಲೆ ಕೊನೆಗೆ ಸಾಮಾನ್ಯ ಜನರಿಗೆ ವಿಮಾನ ಪ್ರಯಾಣಕ್ಕೆ ಬಳಸಲಾಗುವ ಪಾಸ್‌ಪೋರ್ಟ್ ಬಗ್ಗೆ ತಿಳಿಸಿಕೊಂಡಬೇಕೆಂದು ತನ್ನ ಮದುವೆಗೆ ಪಾಸ್‌ಪೋರ್ಟ್ ಹೋಲುವ ಮದುವೆಯ ಆಮಂತ್ರಣ ಪತ್ರಿಕೆ ಮಾಡಿಸಿದ್ದಾರೆ.
ಈ ಕಾರ್ಡ್ ಮೂಲಕ ಧರ್ಮರಾಜ್ ಮದುವೆ ದಿನಾಂಕ, ಮದುವೆ ನಡೆಯುವ ಸ್ಥಳ ಸೇರಿದಂತೆ ಇತರ ಮಾಹಿತಿಗಳನ್ನು ಮದುವೆಯ ಪಾಸ್ಪೋರ್ಟ್ನಂತಿರುವ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಣ ಮಾಡಿಸಿದ್ದಾರೆ. ಇನ್ನು ಧರ್ಮರಾಜ್ ಮನೆಯವರು, ಹಿರಿಯರು ನೋಡಿ ಒಪ್ಪಿಕೊಂಡ ನಂದಗಡ ಗ್ರಾಮದ ರಚಿತಾ ಎಂಬುವವರ ಜತೆ ಧರ್ಮರಾಜ ಅವರ ಮದುವೆ ಇದೇ ಪೆ. 28ರಂದು ಆನಗೋಳ ಗ್ರಾಮದ ಆದಿನಾಥ್ ಮಂಗಲ ಕಾರ್ಯಾಲಯದಲ್ಲಿ ನೆರವೇರಲಿದೆ.