ಬೆಳಗಾವಿ: ನಗರದ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಕೊರೊನಾ ವೈರಸ್ ಕುರಿತು ಜಾಗೃತಿ ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ಎಸ್. ಬಿ. ಬೊಮ್ಮನಹಳ್ಳಿ, ಕೊರೊನಾ ತಡೆಗಟ್ಟಲು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆಗೆ ಸಭೆ ಮಾಡಲಾಗಿದೆ. ಖಾಸಗಿ ಸಂಘ, ಸಂಸ್ಥೆಗಳ ಸಭೆಯನ್ನು ಕರೆದು ಸೂಚಿಸಲಾಗಿದೆ. ದುಪ್ಪಟ್ಟು ದರದಲ್ಲಿ ಮಾಸ್ಕ್ ಮಾರಾಟ ಮಾಡುವುದು, ಸೋಂಕಿನ ಕುರಿತು ಸುಳ್ಳು ಸುದ್ದಿಗಳನ್ನು ಹರಿಬಿಡುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆಯನ್ನು ಇದೇ ಸಂದರ್ಭದಲ್ಲಿ ರವಾನಿಸಿದರು.
ಕೊರೊನಾ ವೈರಸ್ ಹರಡಿದ ದೇಶದಿಂದ ವಾಪಸ್ ಆಗಿರುವವರ ಮೇಲೆ ನಿಗಾ ವಹಿಸಲಾಗಿದೆ, ರೋಗ ಹರಡದಂತೆ ತಡೆಯಲು ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಂಡಿರೋದಾಗಿ ತಿಳಿಸಿದರು.
ಮಾ.15 ರಂದು ಬಿಜೆಪಿ ಎಂಎಲ್‌ಸಿ ಮಹಾಂತೇಶ್ ಕವಟಗಿಮಠ ಮಗಳ ಮದುವೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸರ್ಕಾರದ ನಿರ್ದೇಶನ ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಕಾರ್ಯಾಗಾರದಲ್ಲಿ ಬೆಳಗಾವಿ ನಗರ ಹಾಗೂ ಜಿಲ್ಲೆಯ ಸಂಘ ಸಂಸ್ಥೆಯ ಪದಾಧಿಕಾರಿಗಳು, ಸಮಾಜ ಸೇವಕರು, ಔಷಧ ವಿತರಕರು , ಐಎಂಎ ಹಾಗೂ ಇನ್ನುಳಿದ ಸದಸ್ಯರು ಭಾಗಿಯಾಗಿದ್ರು.