ಬೆಳಗಾವಿ: ಮಹಾಮಾರಿ ಕೊರೊನಾಗೆ ನಗರದ 74 ವರ್ಷದ ವೃದ್ಧ ಮೃತಪಟ್ಟಿದ್ದಾನೆ. ಜಿಲ್ಲೆಯಲ್ಲಿ ಕೊರೊನಾಗೆ ಮೃತಪಟ್ಟವರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.
ಇಂದು ಜಿಲ್ಲೆಯಲ್ಲಿ 8 ಜನರಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 336ಕ್ಕೆ ಏರಿಕೆಯಾಗಿದೆ. ತೀವ್ರ ಉಸಿರಾಟದ ತೊಂದರೆ ಅನುಭವಿಸುತ್ತಿದ್ದ ನಗರದ ಗುಡ್ ಶೆಡ್ ರಸ್ತೆಯ 74 ವರ್ಷದ ವೃದ್ಧನನ್ನು ಎರಡು ದಿನಗಳ ಹಿಂದೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರ ಈ ವೃದ್ಧನ ಗಂಟಲು ದ್ರವ ಸಂಗ್ರಹಿಸಿ ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು. ಉಸಿರಾಟದ ತೊಂದರೆ ಅನುಭವಿಸುತ್ತಿದ್ದ ವೃದ್ಧನಿಗೆ ಕೋವಿಡ್ ವಾರ್ಡ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಿಸದೆ ವೃದ್ಧ ಇಂದು ಬೆಳಗ್ಗೆ ಮೃತಪಟ್ಟಿದ್ದಾನೆ.
ಸಂಜೆ ವೃದ್ಧನ ವರದಿ ಬಂದಿದ್ದು, ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಕೋವಿಡ್ ಮಾರ್ಗಸೂಚಿಯಂತೆ ವೃದ್ಧನ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ.