ಚಿಕ್ಕೋಡಿ (ಬೆಳಗಾವಿ): ಮಾನ್ಯ ಜಿಲ್ಲಾಧಿಕಾರಿಗಳೇ ನಾವು ಮುಗ್ಧರು, ನಮ್ಮನ್ನು ಉಳಿಸಿ. ಸೋಂಕಿತರನ್ನು ಗ್ರಾಮಕ್ಕೆ ಸೇರಿಸಿ ನಮಗೆ ಕೊರೊನಾ ವೈರಸ್ ಬಳುವಳಿಯಾಗಿ ನೀಡಬೇಡಿ. ನಮ್ಮ ಜೀವಕ್ಕೆ ಅಪಾಯ ತರಬೇಡಿ ಎಂದು ಗ್ರಾಮಸ್ಥರು ವಿನಂತಿ ಮಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ನಡೆದಿದೆ.
ಹೀಗೆ ಬರೆದಿರುವ ಬೋರ್ಡ್ ಹಾಕಿ ರಸ್ತೆ ಬಂದ್ ಮಾಡಿ ಸುಟ್ಟಟ್ಟಿ ಗ್ರಾಮಸ್ಥರು ಪ್ರತಿಭಟನೆ ಮಾಡಿದರು. ಕುಡಚಿ ಪಟ್ಟಣದಲ್ಲಿ 4 ಜನರಿಗೆ ಕೊರೊನಾ ಪಾಸಿಟಿವ್ ಹಿನ್ನೆಲೆಯಲ್ಲಿ ಸೋಂಕಿತರು ಪ್ರಾಥಮಿಕ ಸಂಪರ್ಕ ಹೊಂದಿದ್ದ ಜನರನ್ನು ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ಗೆ ಅವಕಾಶ ನೀಡಲಾಗಿದೆ. ಈ ಹಿನ್ನೆಲೆ ಊರಿನ ಒಳಗೆ ಸೋಂಕಿತರನ್ನು ಇರಿಸಿ ಇನ್ನಷ್ಟು ಸೋಂಕು ಹರಡುವಂತೆ ಮಾಡಬೇಡಿ ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ನಮ್ಮ ಊರಿನಲ್ಲಿ ಹೋಮ್ ಕ್ವಾರಂಟೈನ್ ಮಾಡಬೇಡಿ ಎಂದು ಆಕ್ರೋಶ ಹೊರ ಹಾಕಿದ್ದಾರೆ.