ಬೆಳಗಾವಿ: ಜಿಲ್ಲೆ ಕಿತ್ತೂರು ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ವಸತಿ ಶಾಲೆಯಲ್ಲಿ ಮತ್ತೊಮ್ಮೆ ಕೊರೊನಾ ಸ್ಫೋಟಗೊಂಡಿದೆ. 15 ರಿಂದ 18 ವರ್ಷದ 68 ವಿದ್ಯಾರ್ಥಿನಿಯರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಶಾಲಾ ಸಿಬ್ಬಂದಿಯ ಮಹಾಯಡವಟ್ಟಿಗೆ ವಿದ್ಯಾರ್ಥಿಗಳು ಮತ್ತು ಪೋಷಕರು ಕಂಗಾಲಾಗಿದ್ದಾರೆ. ಸೋಂಕಿನ ಗುಣಲಕ್ಷಣಗಳಿದ್ದ ಮಕ್ಕಳು ಸೇರಿದಂತೆ ಎಲ್ಲರನ್ನೂ ಆಡಳಿತ ಮಂಡಳಿ ಶಾಲೆಯಿಂದ ಹೊರ ಹಾಕುತ್ತಿದೆ.
ಓದಿ: ಹಣಕ್ಕಾಗಿ 'ಪತ್ನಿಯರ ವಿನಿಮಯ' ದಂಧೆ ಬೆಳಕಿಗೆ.. ಇದಕ್ಕಾಗಿ ಮೆಸೆಂಜರ್, ಟೆಲಿಗ್ರಾಂ ಗ್ರೂಪ್ ರಚನೆ
ಕಳೆದ ಎರಡು ದಿನಗಳ ಹಿಂದೆ ವಸತಿ ಶಾಲೆಯ ವಿದ್ಯಾರ್ಥಿನಿಯರಿಗೆ ಜ್ವರ ಕಾಣಿಸಿಕೊಂಡಿತ್ತು. 102 ವಿದ್ಯಾರ್ಥಿನಿಯರಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ರ‌್ಯಾಪಿಡ್ ಟೆಸ್ಟ್ ಜತೆಗೆ ಆರ್‌ಟಿಪಿಸಿಆರ್ ಟೆಸ್ಟ್ ಮಾಡಿದ್ದರು. ಎರಡು ದಿನಗಳ ಹಿಂದೆ ರ‌್ಯಾಪಿಡ್ ಟೆಸ್ಟ್ನಲ್ಲಿ 12 ವಿದ್ಯಾರ್ಥಿನಿಯರಿಗೆ ಕೊವಿಡ್ ಸೋಂಕು ದೃಢ ಪಟ್ಟಿತ್ತು. ಇಂದು ಮತ್ತೆ 68 ವಿದ್ಯಾರ್ಥಿನಿಯರಿಗೆ ಸೋಂಕಿರುವುದು ಧೃಡವಾಗಿದೆ.
ಎರಡು ದಿನಗಳ ಹಿಂದೆ 12 ಇಂದು 68 ಸೇರಿ 80 ವಿದ್ಯಾರ್ಥಿಗಳಿಗೆ ಸೋಂಕು ವಕ್ಕರಿಸಿದೆ. ವಿದ್ಯಾರ್ಥಿಗಳ ಜತೆಗೆ 10 ಜನ ಶಾಲಾ ಸಿಬ್ಬಂದಿಗೂ ಸೋಂಕು ಹರಡಿದೆ. ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ ಸೈನಿಕ ವಸತಿ ಶಾಲೆಯಲ್ಲಿ ವಿದ್ಯಾರ್ಥಿ ಹಾಗೂ ಸಿಬ್ಬಂದಿ ಸೇರಿ 90 ಜನರಿಗೆ ಕೊರೊನಾ ವೈರಾಣು ಮೈಸೇರಿದೆ.
ಒಟ್ಟು 600ಕ್ಕೂ ಅಧಿಕ ವಿದ್ಯಾರ್ಥಿಗಳಿರುವ ವಸತಿ ಶಾಲೆಯಲ್ಲಿ ಕೊರೊನಾ ಸ್ಫೋಟಗೊಂಡರೂ ಬೆಳಗಾವಿ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳುತ್ತಿಲ್ಲ. ಶಾಲೆ ಹಾಗೂ ವಸತಿ ನಿಲಯವನ್ನ ಸೀಲ್ಡೌನ್ ಮಾಡದೇ ನಿರ್ಲಕ್ಷ್ಯ ವಹಿಸಿದೆ. ವಸತಿ ನಿಲಯದಲ್ಲಿ ಮಹಾರಾಷ್ಟ್ರ, ಉತ್ತರ ಪ್ರದೇಶ ಸೇರಿದಂತೆ ಹೊರ ರಾಜ್ಯಗಳ ವಿದ್ಯಾರ್ಥಿನಿಯರು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.