ಚಿಕ್ಕೋಡಿ(ಬೆಳಗಾವಿ) : ಕರ್ನಾಟಕ-ಮಹಾರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸಂಖ್ಯೆ ಹೆಚ್ಚುತ್ತಲಿದ್ದು, ಇದರಿಂದ ಇವೆರಡು ರಾಜ್ಯಗಳ ಗಡಿಯಲ್ಲಿರುವ ಸಂಕೇಶ್ವರ ಪಟ್ಟಣದಲ್ಲಿ ನೀಲಗಾರ ಗಣಪತಿ ದರ್ಶನ ಭಾಗ್ಯ ರದ್ದುಗೊಳಿಸಲಾಗಿದೆ ಎಂದು ಶಿವಪುತ್ರಪ್ಪ ಹೆದ್ದೂರಶೆಟ್ಟಿ ಕುಟುಂಬಸ್ಥರು ಈಟಿವಿ ಭಾರತಕ್ಕೆ ಸ್ಪಷ್ಟನೆ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಪ್ರತಿ ವರ್ಷ 21 ದಿನಗಳ ಕಾಲ ಪ್ರತಿಷ್ಠಾಪಿಸುತ್ತಿದ್ದ ಪ್ರಸಿದ್ಧ ನೀಲಗಾರ ಗಣಪತಿ ಸಾರ್ವಜನಿಕರ ದರ್ಶನಕ್ಕೆ ಈ ಬಾರಿ ಲಭ್ಯವಾಗುತ್ತಿಲ್ಲ. ಈ ಬಾರಿ ಮನೆಯಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಲಾಗುವುದು. ಆದರೆ, ಬೇರೆ ಯಾರಿಗೂ ಗಣಪತಿಯ ದರ್ಶನ ಭಾಗ್ಯವಿಲ್ಲ ಎಂದು ತಿಳಿದರು.
ಕೊರೊನಾ ಮಹಾಮಾರಿ ಅತ್ಯಂತ ತ್ವರಿತಗತಿ ಹಬ್ಬುತ್ತಿರುವುದನ್ನು ತಡೆಗಟ್ಟಲು ಸರ್ಕಾರದ ಆದೇಶದ ಮೇರೆಗೆ ಅತ್ಯಂತ ಸರಳ ರೀತಿ ಮನೆಯವರಿಂದ ಮಾತ್ರ ಶ್ರೀ ನೀಲಗಾರ ಗಣಪತಿ ಪ್ರತಿಷ್ಠಾಪನೆ ಮಾಡುವುದಾಗಿ ನಿರ್ಧರಿಸಿದ್ದಾರೆ. ಹೆದ್ದೂರಶೆಟ್ಟಿ ಕುಟುಂಬದವರನ್ನು ಹೊರತು ಪಡಿಸಿ ಬೇರೆ ಯಾರಿಗೂ ಪೂಜೆ ಅಥವಾ ದರ್ಶನಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನೀಲಗಾರ ಗಣಪತಿ ಹಿನ್ನಲೆ : ಸಂಕೇಶ್ವರ ನೀಲಗಾರ ಗಣಪತಿ ಎಂದೇ ಖ್ಯಾತಿ ಪಡೆದಿದ್ದು ಪ್ರತಿ ವರ್ಷವೂ ಸಂಕೇಶ್ವರದ ಗಾಂಧಿಚೌಕ್‌ದ ಬಳಿಯ ಹೆದ್ದೂರಶೆಟ್ಟಿ ಕುಟುಂಬದವರ ಮನೆಯಲ್ಲಿ 21 ದಿನಗಳ ಕಾಲ ಗಣರಾಜನನ್ನು ಪ್ರತಿಷ್ಠಾಪಿಸಲಾಗುತ್ತದೆ. ಹೆದ್ದೂರಶೆಟ್ಟಿ ಕುಟುಂಬ ವಿಜಯಪೂರ ಜಿಲ್ಲೆ ಬಿದರಕೋಟದಿಂದ ಬಂದು 16/17ನೇ ಶತಮಾನದಲ್ಲಿ ಸಂಕೇಶ್ವರದಲ್ಲಿ ಗಣೇಶ ವಿಗ್ರಹವಿಟ್ಟು ಪೂಜಿಸಲಾರಂಭಿಸಿತು. ನೀಲಗಾರ ಗಣಪತಿಯನ್ನು ಪೂಜಿಸಿದ ಭಕ್ತರು ಬೇಡಿದ ಬೇಡಿಕೆಗಳು ಇಷ್ಟಾರ್ಥವಾಗಿದ್ದರಿಂದ ಕ್ರಮೇಣ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೆ ಹೋಯಿತು. ಭಕ್ತರು ವಿನಾಯಕನಿಗೆ, ಮೋದಕ, ಕಡಬು, ಪೇಡೆ ಹೀಗೆ ವಿವಿಧ ಸಿಹಿ ತಿನಸನ್ನು ಇಟ್ಟು ಶ್ರದ್ಧೆಯಿಂದ ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಳ್ಳುತ್ತಾರೆ.
ನೀಲಗಾರ ಕುಟುಂಬದವರು ಪೂಜಿಸುವ ಗಣಪ ಸಾರ್ವಜನಿಕ ಗಣೇಶವಲ್ಲ. ಆದರೆ, ಈ ಗಣೇಶ ಬೇಡಿದವರ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಎಂಬ ನಂಬಿಕೆ ಇದೆ. ಈ ಗಣೇಶನ ದರ್ಶನ ಪಡೆಯಲು ಕರ್ನಾಟಕ, ಗೋವಾ, ಮಹಾರಾಷ್ಟ್ರ, ಕೇರಳ, ಆಂಧ್ರ, ತಮಿಳನಾಡು, ಗುಜರಾತ ಹೀಗೆ ದೇಶ-ವಿದೇಶಗಳಿಂದಲೂ ಭಕ್ತರು ಆಗಮಿಸುತ್ತಾರೆ. ವರ್ಷದಿಂದ ವರ್ಷಕ್ಕೆ ಭಕ್ತರು ಹೆಚ್ಚುತ್ತಲಿದ್ದು, 21 ದಿನಗಳಲ್ಲಿ ಸುಮಾರು 25 ರಿಂದ 30 ಲಕ್ಷ ಭಕ್ತರು ಆಗಮಿಸುತ್ತಾರೆ. ಆದರೆ, ಈ ಬಾರಿ ಕೊರೊನಾ ಕರಿನೆರಳು ಗಣೇಶ ಚತುರ್ಥಿ ಮೇಲೆ ಬಿದ್ದಿದ್ದು, ಈ ಬಾರಿ ಸಂಕೇಶ್ವರ ನೀಲಗಾರ ಗಣಪತಿ ದರ್ಶನ ಭಾಗ್ಯ ಇಲ್ಲದಂತಾಗಿದೆ.