ಬೆಳಗಾವಿ: ಮಹಾಮಾರಿ ಕೊರೊನಾ ಸೋಂಕಿನ ಕರಿನೆರಳು ಈ ಬಾರಿ ಗೌರಿ, ಗಣೇಶ ಹಬ್ಬದ ಮೇಲೂ ಬಿದ್ದಿದ್ದು, ಇದರಿಂದಾಗಿ ವಿಘ್ನನಿವಾರಕ ಗಣೇಶ ಮೂರ್ತಿ ತಯಾರಕರು, ಪೆಂಡಾಲ್, ಧ್ವನಿವರ್ಧಕ ಉದ್ಯಮ ನಂಬಿದ್ದ ನೂರಾರು ಕುಟುಂಬಗಳ ಮೇಲೂ ಪರಿಣಾಮ ಬೀರಿದೆ.
ಕುಂದಾನಗರಿಯಲ್ಲಿ ಪ್ರತಿವರ್ಷ ಗೌರಿ ಗಣೇಶ ಹಬ್ಬವನ್ನು ಸಕಲ ವಾದ್ಯಮೇಳಗಳೊಂದಿಗೆ ಸ್ವಾಗತಿಸಿಕೊಂಡು ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿತ್ತು. ಆದ್ರೀಗ ಸಾರ್ವಜನಿಕ ಆಚರಣೆಗೆ ಕೊರೊನಾ ಸೋಂಕಿನಿಂದಾಗಿ ಕಡಿವಾಣ ಬಿದ್ದಿದೆ. ಸರ್ಕಾರ ಬಿಡುಗಡೆ ಮಾಡಿರೋ ಪರಿಷ್ಕೃತ ಮಾರ್ಗಕಾರ್ಯಸೂಚಿ ಪ್ರಕಾರ ಗಣೇಶೋತ್ಸವ ಆಚರಣೆಯನ್ನು ಸರಳವಾಗಿ ಆಚರಣೆ ಮಾಡುವ ಅನಿವಾರ್ಯತೆಯಿದೆ.
ರಾಜ್ಯ ಸರ್ಕಾರ ಹೊರಡಿಸಿರುವ ಪರಿಷ್ಕೃತ ಆದೇಶದಂತೆ ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆಗೆ ಅನುಮತಿ ನೀಡಿದರೂ ನಾಲ್ಕು ಅಡಿಗೂ ಹೆಚ್ಚು ಎತ್ತರದ ಲಂಬೋದರನ ಮೂರ್ತಿಗಳಿಗೆ ಅವಕಾಶವಿಲ್ಲ. ಇದರಿಂದಾಗಿ ಗಣೇಶ ಮೂರ್ತಿ ತಯಾರಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರತಿ ವರ್ಷ ನೂರಾರು ಗಣಪತಿ ಮೂರ್ತಿ ತಯಾರಿಸುವ ಕಲಾವಿದರು ಗಣೇಶ ಮೂರ್ತಿ ಮಾರಾಟದಿಂದಲೇ ಲಕ್ಷಗಂಟಲೇ ವ್ಯಾಪಾರ ಮಾಡಿ ವರ್ಷಪೂರ್ತಿ ಬೇಕಾಗುವ ಸಂಪಾದನೆಯನ್ನು ಕೂಡಿಟ್ಟುಕೊಂಡು ಜೀವನ ನಡೆಸುತ್ತಿದ್ದರು. ಆದ್ರೀಗ ಈ ಮೊದಲೇ ಅಡ್ವಾನ್ಸ್ ಬುಕ್ಕಿಂಗ್ ಮಾಡಿಕೊಂಡ ಸಾರ್ವಜನಿಕರು ಗಣೇಶ ಮೂರ್ತಿಗಳು ಬೇಡ, ನಾಲ್ಕು ಅಡಿಯಿರುವ ಗಣೇಶ ಮೂರ್ತಿಗಳು ಬೇಕು ಎನ್ನುತ್ತಿದ್ದಾರೆ. ಇದರಿಂದ 5 ಅಡಿ ಮೂರ್ತಿ ತಯಾರಿಸಲು ಹಾಕಿದ ಬಂಡವಾಳ ನೀರಿನಲ್ಲಿ ಹೋಮ ಮಾಡಿದಂತಾಗಿದೆ ಎಂದು ತಮ್ಮ ಅಳಲನ್ನು ತೊಡಿಕೊಳ್ಳುತ್ತಿದ್ದಾರೆ.
ಗಣೇಶಮೂರ್ತಿ ಎತ್ತರ ನಿರ್ಬಂಧ, ಸಂಕಷ್ಟದಲ್ಲಿ ಕಲಾವಿದರು:
ಜಿಲ್ಲೆಯಲ್ಲಿ ಒಟ್ಟು 386 ಗಣೇಶ ಮಂಡಳಗಳಿದ್ದು, ಪ್ರತಿವರ್ಷ ಮೂಷಿಕ ವಾಹನದ ಮೇಲೆ ಅದ್ಧೂರಿಯಾಗಿ ಬರುತ್ತಿದ್ದ ಗಣೇಶನ ಮೂರ್ತಿ ಪ್ರತಿಷ್ಠಾಪನೆಯ ಎತ್ತರಕ್ಕೆ ಸರ್ಕಾರ ನಿರ್ಬಂಧ ಹಾಕಿದೆ. ಇದರಿಂದ ಈಗಾಗಲೇ ಲಕ್ಷಾಂತರ ಬಂಡವಾಳ ಹಾಕಿ ಮೂರನಾಲ್ಕು ತಿಂಗಳ ಮುಂಚಿತವಾಗಿ ಪ್ರಕ್ರಿಯೆ ಶುರು ಮಾಡಿದ್ದ ಮೂರ್ತಿಕಾರರ ಶ್ರಮ, ಬಂಡವಾಳ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಅದರಲ್ಲೂ ಗಣೇಶನ ಮೂರ್ತಿ ತಯಾರಕರಿಗೆ ಗಣೇಶ ಉತ್ಸವ ಇಡೀ ವರ್ಷದ ಬದುಕಿನ ಬುತ್ತಿ ತಯಾರಿಸುವ ದಿನಗಳು. ಹಾಗಾಗಿ ಬಣ್ಣ ಬಣ್ಣದ, ಬಗೆಬಗೆಯ, ವಿವಿಧ ಗಾತ್ರಗಳ ಗಣೇಶ ಮೂರ್ತಿ ತಯಾರಿಸಿ ಕಲೆಯ ಮೂಲಕ ದುಡಿಮೆ ಮಾಡುತ್ತಿದ್ದ ಕಲಾವಿದರಿಗೆ ಗೌರಿಗಣೇಶ ಹಬ್ಬ ಸುದಿನವೂ ಆಗಿತ್ತು. ಆದ್ರೆ ಈ ಬಾರಿ ದೇಶದಲ್ಲಿ ಕೊರೊನಾ ಮಹಾಮಾರಿ ಸೋಂಕಿನಿಂದ ಕಲಾವಿದರ ಹೊಟ್ಟೆಪಾಡಿನ ಬದುಕಿಗೆ ತಣ್ಣೀರು ಎರಚಿದೆ.
ಸೌಂಡ್ ಸಿಸ್ಟಮ್ ಮಾಲೀಕರಿಗೂ ನಷ್ಟ:
ರಾಜ್ಯ ಸರ್ಕಾರ ಸಾರ್ವಜನಿಕ ಗಣೇಶ ಉತ್ಸವಕ್ಕೆ ಅನುಮತಿ ನೀಡಿದ ಪರಿಷ್ಕೃತ ಆದೇಶದಲ್ಲಿಯೂ ಪೆಂಡಾಲ್, ಲೈಟ್ ಆ್ಯಂಡ್ ಸೌಂಡ್ ಸಿಸ್ಟಮ್ ಮಾಲೀಕರಿಗೆ ಅನುಮತಿ ನೀಡಿಲ್ಲ. ಪರಿಣಾಮ, ಬದುಕು ಸಾಗಿಸುವುದಕ್ಕಾಗಿಯೇ ಸಾಲ-ಸೂಲ ಮಾಡಿ ಸೌಂಡ್ ಸಿಸ್ಟಮ್ ಖರೀದಿ ಮಾಡಿಕೊಂಡಿದ್ವಿ. ಆದ್ರೆ, ಜಿಲ್ಲೆಗೆ ಕೋವಿಡ್ ಸೋಂಕು ಪ್ರವೇಶಿಸಿದ ನಂತರ ವಹಿವಾಟು ಸಂಪೂರ್ಣ ಸ್ಥಗಿತಗೊಂಡು ಲಾಕ್‌ಡೌನ್ ಅವಧಿಯಲ್ಲಿ ಎಲ್ಲ ವ್ಯವಹಾರ ನಿಂತುಹೋಗಿದೆ. ಮಾಡಿದ ಸಾಲ ಮರುಪಾವತಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಮಗೂ ಅವಕಾಶ ನೀಡಬೇಕು ಎಂಬುವುದು ಅವ್ರ ಒತ್ತಾಯವೂ ಆಗಿದೆ.