ಬೆಳಗಾವಿ: ರಾಜ್ಯಸಭೆ ಮೆಟ್ಟಿಲೇರಲು ಜಿಲ್ಲೆಯ ಬಿಜೆಪಿ ನಾಯಕರ ಮಧ್ಯೆ ಚಟುವಟಿಕೆ ತೀವ್ರಗೊಂಡಿದೆ.
ಪ್ರಸ್ತುತ ಡಾ. ಪ್ರಭಾಕರ ಕೋರೆ ಅವರು ರಾಜ್ಯಸಭೆ ಸದಸ್ಯರಿದ್ದು, ಅವರ ಅವಧಿ ಜೂ. 25ಕ್ಕೆ ಪೂರ್ಣಗೊಳ್ಳಲಿದೆ. ಮತ್ತೊಂದು ಅವಧಿಗೆ ಆಯ್ಕೆ ಬಯಸಿರುವ ಡಾ. ಪ್ರಭಾಕರ ಕೋರೆ ದಿಢೀರ್ ಬೆಂಗಳೂರಿನತ್ತ ಇಂದು ಬೆಳಗ್ಗೆ ಪ್ರಯಾಣ ಬೆಳೆಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಬುಲಾವ್ ಮೇರೆಗೆ ಡಾ. ಪ್ರಭಾಕರ ಕೋರೆ ಬೆಂಗಳೂರಿಗೆ ತೆರಳಿದ್ದಾರೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ವಂಚಿತ ರಮೇಶ್ ಕತ್ತಿ ಅವರಿಗೆ ರಾಜ್ಯಸಭೆಯಲ್ಲಿ ಅವಕಾಶ ನೀಡುವುದಾಗಿ ಬಿಜೆಪಿ ಹೈಕಮಾಂಡ್ ಭರವಸೆ ನೀಡಿತ್ತು. ಈ ಕಾರಣಕ್ಕೆ ಕತ್ತಿ ಸಹೋದರರು ಲೋಕಸಭೆ ಚುನಾವಣೆಯಲ್ಲಿ ಭಿನ್ನಮತ ಬದಿಗೊತ್ತಿ ಪಕ್ಷದ ಪರ ಕೆಲಸ ಮಾಡಿದ್ದರು. ಅಲ್ಲದೇ ಜೆ.ಪಿ.ನಡ್ಡಾ ಪಕ್ಷದ ಅಧ್ಯಕ್ಷರಾದ ಬಳಿಕ ದೆಹಲಿಗೆ ತೆರಳಿದ್ದ ಕತ್ತಿ ಸಹೋದರರು, ಶುಭಾಷಯ ಕೋರುವ ಜತೆಗೆ ಹಿಂದಿನ ಅಧ್ಯಕ್ಷರು ನೀಡಿದ್ದ ಭರವಸೆಯನ್ನು ನಡ್ಡಾ ಗಮನಕ್ಕೆ ತಂದಿದ್ದರು. ನಾಲ್ಕು ದಶಕಗಳ ರಾಜಕೀಯ ಅನುಭವ ಹೊಂದಿರುವ ಕತ್ತಿ ಕುಟುಂಬ ರಾಜ್ಯ ಬಿಜೆಪಿಯಲ್ಲಿ ಪಡೆದುಕೊಂಡಿದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಉಮೇಶ್ ಕತ್ತಿಗೆ ಮಂತ್ರಿ ಸ್ಥಾನ ನೀಡಲಾಗಿಲ್ಲ. ಇದೀಗ ರಾಜ್ಯಸಭೆಯಲ್ಲಿ ಸಹೋದರನಿಗೆ ಅವಕಾಶ ಕಲ್ಪಿಸಬೇಕು ಎಂದು ಉಮೇಶ್ ಕತ್ತಿ ಪಟ್ಟು ಹಿಡಿದಿದ್ದಾರೆ. ಇದು ಬಿಜೆಪಿ ನಾಯಕರಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ನಾಯಕರ ಒಲವು ಯಾರ ಕಡೆಗೆ ಎಂಬುವುದು ಜಿಲ್ಲಾ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಒಂದು ವೇಳೆ ರಮೇಶ್ ಕತ್ತಿಗೆ ರಾಜ್ಯಸಭೆಯಲ್ಲಿ ಅವಕಾಶ ಸಿಗದಿದ್ರೆ ಬಿಜೆಪಿ ವಿರುದ್ಧ ಕತ್ತಿ ಸಹೋದರರ ಬಂಡಾಯ ನಿಶ್ಚಿತ ಎನ್ನುತ್ತಿವೆ ಮೂಲಗಳು.