ಬೆಳಗಾವಿ: ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೇವಲ ಎರಡು ದಿನ ಬಾಕಿ ಇರುವಾಗಲೇ ಮನೆಯೊಂದರಲ್ಲಿ ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ರೂ.ಮೌಲ್ಯದ ಕುಕ್ಕರ್ಗಳನ್ನು ಪೊಲೀಸರು ಜಪ್ತಿ ಮಾಡಿರುವ ಘಟನೆ ಬೈಲಹೊಂಗಲ ತಾಲೂಕಿನ ತಡಸಲೂರ ಗ್ರಾಮದಲ್ಲಿ ನಡೆದಿದೆ.
ಖಚಿತ ಮಾಹಿತಿ ಮೇರೆಗೆ ಭಾನುವಾರ ರಾತ್ರಿ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು ಮತ್ತು ಚುನಾವಣಾ ನೀತಿ ಸಂಹಿತೆ ಅಧಿಕಾರಿಗಳ ತಂಡ ಚುನಾವಣೆಯಲ್ಲಿ ಮತದಾರರಿಗೆ ಹಂಚಲು ಸಂಗ್ರಹ ಮಾಡಿ ಇಟ್ಟಿದ್ದ 25 ಲಕ್ಷ ರೂ.ಮೌಲ್ಯದ 1800 ಕುಕ್ಕರ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕುಕ್ಕರ್ ಬೈಲಹೊಂಗಲ ಮತಕ್ಷೇತ್ರದಲ್ಲಿ ಜಪ್ತಿಯಾಗಿದ್ದು, ಯಾರು, ಯಾರಿಗೆ ಕೊಡಲು ಉದ್ದೇಶಿಸಿದ್ದರು ಎನ್ನುವ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರಗಳಿಗೆ ತೆರೆ: ಮತದಾನ ಮುಕ್ತಾಯದ 48 ಗಂಟೆಗೂ ಮುನ್ನ ಬಹಿರಂಗ ಪ್ರಚಾರ ಮುಗಿಯಲಿದೆ. ಅದರಂತೆ ಇಂದು ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳುತ್ತದೆ. ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಯಾವುದೇ ಅಭ್ಯರ್ಥಿ ಧ್ವನಿವರ್ಧಕ ಬಳಸಿ, ಸಮಾವೇಶ, ರೋಡ್ ಶೋಗಳ ಮೂಲಕ ಮತ ಯಾಚಿಸುವಂತಿಲ್ಲ. ಆದರೆ, ಮನೆ ಮನೆಗೆ ತೆರಳಿ ಮಂಗಳವಾರ ಸಂಜೆಯವರೆಗೂ ಮತ ಕೇಳಬಹುದು.
ಮದ್ಯ ಮಾರಾಟ ನಿಷೇಧ: ಸೋಮವಾರ ಮಧ್ಯರಾತ್ರಿಯಿಂದ ಮೇ 10ರ ಮಧ್ಯರಾತ್ರಿಯವರೆಗೂ ಮದ್ಯ ಮಾರಾಟ ನಿಷೇಧಿಸಲಾಗಿದೆ. ಮೇ 10ರಂದು ಚುನಾವಣಾ ಮತದಾನ ನಡೆಯಲಿದೆ. ಹೀಗಾಗಿ ಒಂದು ದಿನ ಮುಂಚೆಯೇ ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗುತ್ತದೆ. ಮೇ 13ರಂದು ಫಲಿತಾಂಶ ಪ್ರಕಟವಾಗುವ ಹಿನ್ನೆಲೆಯಲ್ಲಿ ಮೇ 12ರ ಮಧ್ಯರಾತ್ರಿಯಿಂದ ಮೇ 13ರ ಮಧ್ಯರಾತ್ರಿಯವರೆಗೂ ಮದ್ಯ ಮಾರಾಟ ನಿಷೇಧಿಸಲಾಗಿದೆ. ಯಾವುದೇ ಮದ್ಯದಂಗಡಿಗಳು, ಮದ್ಯ ಮಾರಾಟ ಮಾಡುವ ಹೋಟೆಲ್‌ಗಳು, ಪಂಚತಾರಾ ಹೋಟೆಲ್‌ಗಳು ಸೇರಿದಂತೆ ಎಲ್ಲಿಯೂ ಮದ್ಯ ಮಾರಾಟ ಮಾಡುವಂತಿಲ್ಲ. ಪೊಲೀಸರು ಸಂಬಂಧಪಟ್ಟ ಕ್ಷೇತ್ರದಲ್ಲಿ ಸಂಚಾರ ಮಾಡಿ ಮದ್ಯದಂಗಡಿಗಳನ್ನು ಮುಚ್ಚಿಸಲಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಗ್ಯಾರಂಟಿ ಆರು ತಿಂಗಳಲ್ಲಿ ಜಾರಿಯಾಗದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಯು ಟಿ ಖಾದರ್