ಬೆಳಗಾವಿ: ವಿಶ್ವಬ್ಯಾಂಕ್ ನೆರವಿನಿಂದ ಮಹಾನಗರದಲ್ಲಿ ನಿರಂತರ ಕುಡಿಯುವ ನೀರು ಯೋಜನೆ ಜಾರಿಗೆ ಬರುತ್ತಿದ್ದು, ಇದರ ಅನುಷ್ಠಾನದ ಬಳಿಕ ಕುಂದಾನಗರಿಗರ ದಾಹ ತೀರಲಿದೆ.
ಕಳೆದ ಹಲವು ವರ್ಷಗಳಿಂದ ಮಹಾನಗರದ 10 ವಾರ್ಡ್‍ಗಳಲ್ಲಿ ಪ್ರಾಯೋಗಿಕವಾಗಿ ಈಗಾಗಲೇ ನಿರಂತರ ಕುಡಿಯುವ ನೀರು ಯೋಜನೆ ಅನುಷ್ಠಾನಗೊಳಿಸಲಾಗಿದೆ. ಇದು ಯಶಸ್ವಿಯಾದ ಹಿನ್ನೆಲೆಯಲ್ಲಿ ಇದೀಗ ನಗರದಾದ್ಯಂತ ಈ ಯೋಜನೆ ವಿಸ್ತರಿಸಲು ಮಹಾನಗರ ಪಾಲಿಕೆ ಮುಂದಾಗಿದೆ. ನಿರಂತರ ಕುಡಿಯುವ ನೀರು ಯೋಜನೆ ಜಾರಿಯಿಂದ ನೀರು ಪೋಲಾಗುವುದು ನಿಂತಿದ್ದು, ಜಲಮಂಡಳಿಗೂ ಅಧಿಕ ಪ್ರಮಾಣದಲ್ಲಿ ತೆರಿಗೆ ಹರಿದುಬರುತ್ತಿದೆ. ಇದರಿಂದ ಇದೀಗ ನಗರದ ಎಲ್ಲಾ ವಾರ್ಡ್‍ಗಳಲ್ಲಿ ಈ ಯೋಜನೆ ಶೀಘ್ರವೇ ಅನುಷ್ಠಾನಗೊಳ್ಳಲಿದೆ.
ವಿಶ್ವ ಬ್ಯಾಂಕ್ ಕೂಡ ಯೋಜನೆ ಜಾರಿಗೆಗೆ ನೆರವು ನೀಡಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಕೂಡ ಪೂರ್ಣಗೊಂಡಿದ್ದು, ನಗರದ ಇತರ 48 ವಾರ್ಡ್‍ಗಳಲ್ಲಿ ಸಮಿಕ್ಷೆ ಕಾರ್ಯ ನಡೆದಿದೆ. ಮುಂದಿನ ತಿಂಗಳು ನಿರಂತರ ಕುಡಿಯುವ ನೀರು ಯೋಜನೆಗೆ ಚಾಲನೆ ದೊರೆಯಲಿದೆ.
804 ಕೋಟಿ ಮೊತ್ತದ ಪ್ರಾಜೆಕ್ಟ್:
804 ಕೋಟಿ ರೂ. ವೆಚ್ಚದಲ್ಲಿ ನಗರದಲ್ಲಿ ನಿರಂತರ ಕುಡಿಯುವ ನೀರು ಯೋಜನೆ ಜಾರಿಗೊಳಿಸಲಾಗುತ್ತಿದೆ. ಬೆಳಗಾವಿ ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ ಈ ಯೋಜನೆಯನ್ನು ಜಾರಿಗೊಳಿಸಲಿವೆ. 804 ಕೋಟಿ ಮೊತ್ತದ ಹಣದಲ್ಲಿ 571.35 ಕೋಟಿ ರೂ. ಯೋಜನೆಯ ಕಾಮಗಾರಿಗೆ ಹಾಗೂ 232. 78 ಕೋಟಿ ರೂ., 11 ವರ್ಷಗಳ ಕಾಲ ನಿರ್ವಹಣೆಗೆ ಮೀಸಲಿಡಲಾಗಿದೆ. ಚೆನ್ನೈ ಮೂಲದ ಎಲ್ ಅಂಡ್ ಟಿ ಕಂಪನಿಯು ಈ ಯೋಜನೆಯ ಟೆಂಡರ್ ಪಡೆದಿದೆ. ಈ ಯೋಜನೆಗೆ ವಿಶ್ವಬ್ಯಾಂಕ್ ಶೇ. 72ರಷ್ಟು ಅನುದಾನ ನೀಡುತ್ತಿದ್ದು, ಇನ್ನುಳಿದ ಶೇ.28 ಹಣವನ್ನು ಮಹಾನಗರ ಪಾಲಿಕೆ ವ್ಯಯಿಸಲಿದೆ.
ಆರು ತಿಂಗಳ ಕಾಲ ಸಮೀಕ್ಷೆ ಹಾಗೂ ಯೋಜನೆ ಸಿದ್ಧಪಡಿಸಲಿರುವ ಈ ಕಂಪನಿ ಫೆ. ತಿಂಗಳಿಂದ ಕಾಮಗಾರಿ ಆರಂಭಿಸಲಿದೆ. ನಾಲ್ಕು ವರ್ಷದಲ್ಲಿ ಯೋಜನೆ ಪೂರ್ಣಗೊಳ್ಳಲಿದ್ದು, 11 ವರ್ಷಗಳ ಎಲ್ ಅಂಡ್ ಟಿ ಕಂಪನಿ ನಿರ್ವಹಣೆ ನೋಡಿಕೊಳ್ಳಲಿದೆ.
ಎರಡು ಶುದ್ಧೀಕರಣ ಘಟಕ:
ಹಿಡಕಲ್ ಜಲಾಶಯ ಹಾಗೂ ರಕ್ಕಸಕೊಪ್ಪ ಡ್ಯಾಂ ಮೂಲಕ ನಗರಕ್ಕೆ ನೀರು ಸರಬರಾಜು ಮಾಡಲಾಗುತ್ತದೆ. ಸದ್ಯ ಪ್ರಾಯೋಗಿಕವಾಗಿ ಜಾರಿಯಾಗಿರುವ ನಿರಂತರ ಕುಡಿಯುವ ನೀರು ಯೋಜನೆಗೂ ಈ ಎರಡೂ ಜಲಾಶಯಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಹಿಡಕಲ್ ಜಲಾಶಯದಿಂದ ನಗರಕ್ಕೆ ಪೈಪ್‍ಲೈನ್ ಮೂಲಕ ನೀರು ತರಲಾಗಿದ್ದು ಬಸವಣ್ಣ ಕೊಳ್ಳದಲ್ಲಿ ಶುದ್ಧಿಕರಣ ಘಟಕ ಅಳವಡಿಸಲಾಗಿದೆ.
ಹಿಡಕಲ್ ಜಲಾಶಯದ ಮೂಲಕ ಬಸವಣ್ಣ ಕೊಳ್ಳಕ್ಕೆ ಬರುವ ನೀರು ಇಲ್ಲಿ ಶುದ್ಧೀಕರಣ ಮಾಡಿದ ಬಳಿಕವೇ ನಗರವಾಸಿಗಳಿಗೆ ಎರಡು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಇನ್ನು ರಕ್ಕಸಕೊಪ್ಪ ಜಲಾಶಯದ ಮೂಲಕ ನಗರಕ್ಕೆ ಬರುವ ನೀರನ್ನು ಲಕ್ಷ್ಮಿ ಟೇಕಡಿಯಲ್ಲಿ ನಿರ್ಮಿಸಲಾಗಿರುವ ಶುದ್ಧೀಕರಣ ಘಟಕಕ್ಕೆ ತರಲಾಗುತ್ತದೆ. ಶುದ್ಧೀಕರಣವಾದ ಬಳಿಕವೇ ನಗರಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ. ಎರಡು ಜಲಾಶಯದಿಂದ ನಗರಕ್ಕೆ ನೀರು ತರುತ್ತಿರುವ ಪರಿಣಾಮ ನಗರದಲ್ಲಿ ಈವರೆಗೆ ನೀರಿನ ಅಭಾವ ಆಗಿಲ್ಲ.
ಇನ್ನು ಬೆಳಗಾವಿ ಬಹುತೇಕ ನಿವಾಸಿಗಳ ಮನೆಯಲ್ಲಿ ಬಾವಿ ಇರುವ ಕಾರಣ ಬರಗಾಲದ ಸಮಯದಲ್ಲಿಯೂ ನಗರದಲ್ಲಿ ನೀರಿಗೆ ಕೊರತೆ ಆಗಿಲ್ಲ. ಅಗತ್ಯತೆ ಬಿದ್ರೆ ನಗರವಾಸಿಗಳಿಗೆ ಪಾಲಿಕೆಯಿಂದಲೇ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ.