ಬೆಳಗಾವಿ: ಕಿತ್ತೂರು ರಾಣಿ ಚೆನ್ನಮ್ಮನ ಇತಿಹಾಸ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೊತ್ತಾಗಬೇಕು. ಈ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಸ್ಥಳ ಹುಡುಕಾಟ ನಡೆಸಲಾಗುತ್ತಿದೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.
ಈ ವಿಮಾನ ನಿಲ್ದಾಣ ಪ್ರಯಾಣಿಕರ ಓಡಾಟಕ್ಕೆ ಸಿಮೀತವಾಗದೆ ದೇಶ-ವಿದೇಶಗಳಿಂದ ರಪ್ತು ಮತ್ತು ಆಮದು ಮಾಡಿಕೊಳ್ಳುವಂತಹ ನಿಲ್ದಾಣ ಮಾಡಲು ಈಗಾಗಲೇ ಚಿಂತನೆ ಮಾಡಲಾಗುತ್ತಿದೆ. ಕಿತ್ತೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾದ್ರೆ ಎಲ್ಲರಿಗೂ ಅನುಕೂಲವಾಗಲಿದೆ. ಆ ನಿಟ್ಟಿನಲ್ಲಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕಿತ್ತೂರಿನಲ್ಲಿ ವಿಮಾನ ನಿಲ್ದಾಣ ಮಾಡಿ ಕಿತ್ತೂರು ರಾಣಿ ಚೆನ್ನಮ್ಮನ ಹೆಸರನ್ನೇ ಇಡಲಾಗುತ್ತದೆ.
ಇದರ ಜೊತೆಗೆ ದಿ.ಸುರೇಶ್ ಅಂಗಡಿಯವರ ಕನಸಿನ ಕೂಸಾದ ಬೆಳಗಾವಿಯಿಂದ ಕಿತ್ತೂರು ಮಾರ್ಗವಾಗಿ ನೇರವಾಗಿ ಹುಬ್ಬಳ್ಳಿಗೆ ಹೈಸ್ಪೀಡ್ ರೈಲು ಪ್ರಾರಂಭಿಸುವ ಕೆಲಸವನ್ನು ಆದಷ್ಟು ಬೇಗ ಮಾಡಲಾಗುವುದು ಎಂದು ಸಚಿವ ನಿರಾಣಿ ಭರವಸೆ ನೀಡಿದರು.
ಸಿಎಂ ಬೊಮ್ಮಾಯಿ ಕಿತ್ತೂರು ಜಿಲ್ಲಾ ಉತ್ಸವವನ್ನು ರಾಜ್ಯ ಉತ್ಸವವನ್ನಾಗಿ ಆಚರಣೆ ಮಾಡಲು ಘೋಷಣೆ ಮಾಡಿದ್ದಾರೆ. ಯಡಿಯೂರಪ್ಪ ಸರ್ಕಾರವಿದ್ದಾಗ ಕಿತ್ತೂರು ಪ್ರಾಧಿಕಾರಕ್ಕೆ ಮೀಸಲಾಗಿದ್ದ 50 ಕೋಟಿ ಹಣವನ್ನು ಬರುವ ಮಾರ್ಚ್ ಒಳಗೆ ಬಿಡುಗಡೆ ಮಾಡಲು ಒಪ್ಪಿಗೆ ಸೂಚಿಸಿದ್ದರು. ಇದಲ್ಲದೇ, ಮುಂಬೈ ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಎಂದು ಮರುನಾಮಕರಣ ಮಾಡಲು ಘೋಷಣೆ ಮಾಡಿದ ಸಿಎಂಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಇದೇ ವೇಳೆ ಉಪಚುನಾವಣೆ ಬಗ್ಗೆ ಮಾತನಾಡಿ, ಕಳೆದ ಮೂರು ದಿನಗಳಿಂದ ಹಾನಗಲ್ ಉಪ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿದ್ದೇನೆ. ಇಲ್ಲಿನ ಪ್ರತಿ ವಾರ್ಡ್ಗಳು ನಮಗೆ ಗೊತ್ತಿವೆ. ಹೀಗಾಗಿ, ಶಿವರಾಜ್ ಸಜ್ಜನರ 25 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಸಚಿವ ನಿರಾಣಿ ಭವಿಷ್ಯ ನುಡಿದರು.
ಉಪಚುನಾವಣೆ ನೋಟು ಹಂಚಿಕೆ ವಿಚಾರಕ್ಕೆ ಪ್ರತಿಕ್ರಿಯಿಸುತ್ತಾ, ಡಿ.ಕೆ.ಶಿವಕುಮಾರ್ ಅವರಿಗೆ ಹಣ ಕೊಟ್ಟು ಗೊತ್ತಿದೆ. ಅದಕ್ಕೆ ಅವರು ಆರೋಪ ಮಾಡುತ್ತಿದ್ದಾರೆ. ನಾವು ಹಣ ಕೊಟ್ಟಿರುವ ಬಗ್ಗೆ ದಾಖಲೆ ಬಿಡುಗಡೆ ಮಾಡಲಿ. ಅದನ್ನು ಬಿಟ್ಟು ಹೇಳಿಕೆ ಕೊಡುವುದರಲ್ಲಿ ಯಾವುದೇ ರೀತಿಯ ಅರ್ಥವಿಲ್ಲ. ಪ್ರಾಮಾಣಿಕವಾಗಿ ನಾವು ಚುನಾವಣೆ ಮಾಡುತ್ತಿದ್ದೇವೆ. ಮತದಾರರ ಆಶೀರ್ವಾದ, ಬಸವರಾಜ ಬೊಮ್ಮಾಯಿ ಉತ್ತಮ ಆಡಳಿತದಿಂದ ಹಾನಗಲ್ ಉಪಚುನಾವಣೆ ಗೆಲ್ಲುತ್ತೇವೆ ಎಂದರು.