ಬೆಳಗಾವಿ/ಬೆಂಗಳೂರು: "ನನ್ನ ಸುದೀರ್ಘ ರಾಜಕಾರಣದಲ್ಲಿ ಯಾವತ್ತೂ ಪ್ರತಿಪಕ್ಷಗಳಿಂದ ನನಗೆ ತೊಂದರೆ ಆಗಿಲ್ಲ. ಇಡಿ, ಐಟಿ ಮೂಲಕ ತೊಂದರೆ ನೀಡಿಲ್ಲ. ಆದರೆ ಜೊತೆಯಲ್ಲಿರುವ ಸ್ನೇಹಿತರೇ ಬೆನ್ನಿಗೆ ಚೂರಿ ಹಾಕಿದಾಗ ನೋವಾಗಿದೆ. ಅದನ್ನು ತಡೆದುಕೊಂಡಿರುವುದೇ ದೊಡ್ಡದು" ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು. "ಸದನವನ್ನು ನಡೆಸಿದ ಸುದೀರ್ಘ ಅನುಭವ ಸಭಾಪತಿ ಬಸವರಾಜ್ ಹೊರಟ್ಟಿ ಅವರಿಗಿದೆ. 40 ವರ್ಷ ಕಾಂಗ್ರೆಸ್ ವಿರುದ್ಧವಾಗಿದ್ದರೂ ಸದನದಲ್ಲಿ ಪ್ರಜಾಪ್ರಭುತ್ವ, ಸಂವಿಧಾನದ ತಿರುಳನ್ನು ನೀವು ಎತ್ತಿ ಹಿಡಿದಿದ್ದೀರಿ, ಅದಕ್ಕಾಗಿ ಧನ್ಯವಾದಗಳು" ಎಂದರು.
"ನಾನು ಪ್ರತಿಪಕ್ಷ ನಾಯಕನಾಗಿದ್ದಾಗ ನನಗೆ ಬಿಜೆಪಿಯವರೆಲ್ಲರೂ ಸಹಕಾರ ಕೊಟ್ಟಿದ್ದರು. ಹಾಗಾಗಿ ಅವರಿಗೂ ಧನ್ಯವಾದ ಸಲ್ಲಿಸುತ್ತೇನೆ" ಎಂದು ಹೇಳಿದರು. ಮಾತು ಮುಂದುವರೆಸಿದ ಅವರು, "ಇಲ್ಲಿನ ಕೆಲವರ ಬಗ್ಗೆ ಒಳ್ಳೆಯ ಗೌರವ ಇದೆ. ಮರಿತಿಬ್ಬೇಗೌಡರನ್ನು ಗುರು ಎಂದು ಒಪ್ಪಿಕೊಂಡಿದ್ದೇನೆ" ಎಂದರು. ಮೊದಲ ಸಾಲಿನಲ್ಲಿದ್ದ ಹರಿಪ್ರಸಾದ್ ಕಡೆಯ ಸಾಲಿಗೆ ಹೋಗಿದ್ದಾರೆ ಎನ್ನುವ ಬಿಜೆಪಿ, ಜೆಡಿಎಸ್ ಸದಸ್ಯರ ಹೇಳಿಕೆ ಉಲ್ಲೇಖಿಸಿ ಮಾತನಾಡುತ್ತಾ, "ನಾನು ಪೊಲಿಟಿಕಲ್ ಆ್ಯಕ್ಟಿವಿಸ್ಟ್ ಅಷ್ಟೇ ವ್ಯಾಪಾರಸ್ಥ ಅಲ್ಲ" ಎಂದು ಟಾಂಗ್ ಕೊಟ್ಟರು.
"ರಾಜಕೀಯ ನಿಂತ ನೀರಲ್ಲ, ಹರಿಯುತ್ತಾ ಹೋಗಲಿದೆ. ರಾಜ್ಯಸಭೆಯಲ್ಲಿ ದೊಡ್ಡವರು ಮಾತನಾಡುವಾಗ ಕೇಳಿಕೊಂಡು ಕಲಿಯುತ್ತಿದ್ದೆವು. ಇಲ್ಲಿಯೂ ಹೊರಟ್ಟಿ, ಮರಿತಿಬ್ಬೇಗೌಡರಿಂದ ಕಲಿಯುವುದಿದೆ. ಇಲ್ಲಿ ನಾನು ಮಾತನಾಡುವಾಗ ಯಾರ ವಿರುದ್ಧ ವೈಯಕ್ತಿಕವಾಗಿ ಮಾತನಾಡಿಲ್ಲ. ಅಂತಹ ಉದ್ದೇಶವೂ ಇರಲಿಲ್ಲ. ಆದರೆ ಮಾತಿನ ಭರಾಟೆಯಲ್ಲಿ ಬಿಜೆಪಿ ಸದಸ್ಯ ರವಿಕುಮಾರ್ ವಿರುದ್ಧ ಕೆಲವು ಬಾರಿ ಟೀಕಿಸಿದ್ದೇನೆ. ಅವರಿಗೆ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ" ಎಂದರು.
ಈ ವೇಳೆ ಸದನದ ಸದಸ್ಯರಲ್ಲದ ಬಿಜೆಪಿ ಸದಸ್ಯರ ಹೆಸರು ಉಲ್ಲೇಖಿಸಿದ ಹರಿಪ್ರಸಾದ್, ಚಿಕ್ಕಮಗಳೂರಿನ ಬಿಜೆಪಿ ನಾಯಕರೊಬ್ಬರು ಅವರ ಜೀವನದಲ್ಲಿ ಏನಾದರೂ ಸತ್ಯ ಹೇಳಿದ್ದರೆ ಅದು ಮ್ಯಾಚ್ ಫಿಕ್ಸಿಂಗ್ ಆಗಲಿದೆ ಎನ್ನುವ ಹೇಳಿಕೆ ನೀಡಿದ್ದು ಮಾತ್ರ. ಅವರನ್ನು ಸೋಲಿಸಲು ನಾನು, ಬೋಜೇಗೌಡ ಹೋಗಿದ್ದವು ಎಂದರು. ಇದಕ್ಕೆ ಮಧ್ಯಪ್ರವೇಶಿಸಿದ ಸಭಾಪತಿ ಬಸವರಾಜ ಹೊರಟ್ಟಿ, ಬೋಜೇಗೌಡ ಇದನ್ನು ಒಪ್ಪುತ್ತಾರೆ ಎಂದರು. ಬೋಜೇಗೌಡ ಪ್ರತಿಕ್ರಿಯಿಸಿ, ನಾನಿದಕ್ಕೆ ಬದ್ದನಿದ್ದೇನೆ, ಈ ರೀತಿ ಮಾಡಿದ್ದನ್ನು ಒಪ್ಪಿಕೊಂಡಿದ್ದೇನೆ. ಮಾಧ್ಯಮ, ಸದಸ್ಯರು, ಪಕ್ಷದ ನಾಯಕರ ಮುಂದೆಯೂ ಹೇಳಿದ್ದೇನೆ ಎಂದು ತಿಳಿಸಿದರು.
ಬಿಜೆಪಿ ಸದಸ್ಯ ರಘುನಾಥ ಮಲ್ಕಾಪುರೆ, ಈ ಸದನದ ಸದಸ್ಯರಲ್ಲದವರ ಹೆಸರಿಗೆ ಆಕ್ಷೇಪ ವ್ಯಕ್ತಪಡಿಸಿದರು. ತಕ್ಷಣವೇ ಬಿಜೆಪಿ ಆಕ್ಷೇಪಣೆ ಪುರಸ್ಕರಿಸಿದ ಸಭಾಪತಿ ಸದನದ ಸದಸ್ಯರಲ್ಲದವರ ಹೆಸರನ್ನು ಕಡತದಿಂದ ತೆಗೆದುಹಾಕಿಸಿದರು. ನಂತರ ಎಲ್ಲರಿಗೂ ಧನ್ಯವಾದ ಸಲ್ಲಿಸಿ ಹರಿಪ್ರಸಾದ್ ಮಾತು ಮುಗಿಸಿದರು.
ಇದನ್ನೂ ಓದಿ: ವಿಧಾನ ಪರಿಷತ್ನಲ್ಲಿ ಆಡಳಿತ-ಪ್ರತಿಪಕ್ಷ ನಾಯಕರ ಗದ್ದಲ; ಪರಿಸ್ಥಿತಿ ತಿಳಿಗೊಳಿಸಿದ ಸಭಾಪತಿ ಹೊರಟ್ಟಿ