ಬೆಳಗಾವಿ/ಬೆಂಗಳೂರು: ಅವರ ಪಕ್ಷದವರ (ಬಿಜೆಪಿ) ವಿರುದ್ಧವೇ ಭ್ರಷ್ಟಾಚಾರದ ಆರೋಪ ಮಾಡುವ, ಹೊಂದಾಣಿಕೆ ರಾಜಕೀಯ ಮತ್ತಿತರ ವಿಷಯಗಳನ್ನು ಮಾತನಾಡುವುದರ ಜೊತೆಗೆ ಅವುಗಳನ್ನು ಜೀರ್ಣಿಸಿಕೊಳ್ಳುವ ತಾಕತ್ತು ಇರುವುದು ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಮಾತ್ರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದಿರುವ ಸಿಎಂ ಸಿದ್ದರಾಮಯ್ಯ ಬಿಜೆಪಿ ನಾಯಕರ ಕಾಲೆಳೆದರು.
ವಿಧಾನಸಭೆಯಲ್ಲಿ ಇಂದು ಉತ್ತರ ಕರ್ನಾಟಕ ಸಮಸ್ಯೆಗಳ ಕುರಿತು ಚರ್ಚೆಗೆ ಉತ್ತರ ನೀಡುತ್ತಿದ್ದ ವೇಳೆ ಮಾತನಾಡಿದ ಸಿಎಂ, ಯತ್ನಾಳ್ ಅವರನ್ನು ಸ್ಟ್ರಾಂಗ್ ಕ್ರಿಟಿಕ್ ಇನ್ ಸೈಡರ್ ಅಂತ ಕರೆಯಬಹುದು ಎಂದರು. ಆಗ ಯತ್ನಾಳ್ ಎದ್ದುನಿಂತು ಟೀಕೆ ಮಾಡುವವರು ರಾಜ್ಯದಲ್ಲಿ ಒಬ್ಬರಾದರೂ ಬೇಕಲ್ಲವೇ?. ಎಲ್ಲರ ಲೆಕ್ಕಪತ್ರವನ್ನು ಬಿಚ್ಚಿಡುತ್ತೇನೆ. ತಮ್ಮ ಮೇಲೆ ಕ್ರಮ ತೆಗೆದುಕೊಂಡರೂ ಶಾಸಕನಾಗೋದನ್ನು ಮಾತ್ರ ಯಾರೂ ತಪ್ಪಿಸಲಾರರು. ತಪ್ಪಿಸಿದರೂ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದು ಬರುತ್ತೇನೆ ಎಂದು ಹೇಳಿದರು. ಆಗ ಡಿಸಿಎಂ ಡಿ.ಕೆ.ಶಿವಕುಮಾರ್ ಎದ್ದು ನಿಂತು, ಮುಖ್ಯಮಂತ್ರಿ ಸೀಟಿಗೆ ಎಷ್ಟು ಕೋಟಿ, ವ್ಯಾಪಾರ ಹೇಗೆಲ್ಲ ನಡೆಯುತ್ತದೆ ಅಂತ ಒಮ್ಮೆ ಹೇಳಿದ್ದೀರಲ್ಲ, ಅದನ್ನು ಮತ್ತೆ ಹೇಳಿ ಕೇಳೋಣ ಎಂದರು. ಅದಕ್ಕೆ ಯತ್ನಾಳ್ ಅವರು, ಸಮಯ ಬರಲಿ ಎಲ್ಲವನ್ನೂ ಹೇಳುತ್ತೇನೆ ಎಂದರು.
ನಂತರ ಸಿಎಂ ಸಿದ್ದರಾಮಯ್ಯ ಮಾತು ಮುಂದುವರಿಸಿದ ವೇಳೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಅವರಿಗೆ ದಾಖಲೆ, ಕಾನೂನು, ಅಂಕಿ-ಅಂಶಗಳು ಗೊತ್ತಿಲ್ಲವೆಂದು ಅವರ ಪಕ್ಷದ ಶಾಸಕರೇ ಹೇಳಿದರು. ವಸತಿ ಯೋಜನೆ ಬಗ್ಗೆ ಸದನದಲ್ಲಿ ಮಾತನಾಡುವಾಗ ಅವರು ಸಿದ್ದರಾಮಯ್ಯನವರ ಎದುರು ಸರಿಯಾದ ದಾಖಲೆಗಳಿಲ್ಲದೆ ತಡಬಡಾಯಿಸಿದ ಪ್ರಸಂಗ ನಡೆಯಿತು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ತಾವು ಎಷ್ಟು ವರ್ಷ ಸಿಎಂ ಆಗಿ ಕೆಲಸ ಮಾಡಿದ್ದು ಅಂತ ಸಿದ್ದರಾಮಯ್ಯ ಕೇಳಿದಾಗ, ಅಶೋಕ್ ಅವರು ಆರೂವರೆ ವರ್ಷ ಅನ್ನುತ್ತಾರೆ. ರೀ ಸ್ವಾಮಿ ಸಂವಿಧಾನಕ್ಕೆ ವಿರೋಧವಾಗಿ ಮಾತನಾಡುತ್ತಿರಲ್ಲ. ಮುಖ್ಯಮಂತ್ರಿ ಹಾಗೂ ಸರ್ಕಾರದ ಅವಧಿ ಇರುವುದೇ ಐದು ವರ್ಷ ಅಂತ ಎಂದು ಸಿದ್ದರಾಮಯ್ಯ ಹೇಳಿದರು. ಆಗ ಅಶೋಕ್ ಸಮರ್ಥನೆ ನೀಡಲು ಪ್ರಯತ್ನಿಸಿದಾಗ, ಸಿದ್ದರಾಮಯ್ಯ, ವೃಥಾ ಆರೋಪ ಮಾಡಬೇಡಿ, ದಾಖಲೆಗಳಿದ್ದರೆ ಮಾತನಾಡಿ ಎಂದರು.
ಪ್ರತಿಪಕ್ಷದ ನಾಯಕ ಆರ್.ಅಶೋಕ್ ಕೇಳಿದ ಪ್ರಶ್ನೆಯೊಂದಕ್ಕೆ ಸಿಎಂ ಸಿದ್ದರಾಮಯ್ಯ, ಹಿಂದಿನ ಸರ್ಕಾರದ ಹೇಳಿಕೆಯೊಂದನ್ನು ಓದಿ ನಿಮ್ಮ ಪ್ರಶ್ನೆಗೆ ಇದೇ ಉತ್ತರ ಎಂದರು. ಅವರ ಉತ್ತರದಿಂದ ತೃಪ್ತರಾಗದ ಅಶೋಕ್, ಹಿಂದಿನ ಇತಿಹಾಸವನ್ನು ಕೆದಕಲಾರಂಭಿಸಿದರು. ಮಾತನಾಡುವಾಗ ಅವರು ಅಂಕಿ-ಅಂಶಗಳನ್ನು ಸಹ ಸದನಕ್ಕೆ ಸರಿಯಾಗಿ ನೀಡಲ್ಲ, ಸಿದ್ದರಾಮಯ್ಯ ಅವರನ್ನು ಕುರಿತು ನೀವು 2014 ರಿಂದ 2018 ರವರೆಗೆ ಮುಖ್ಯಮಂತ್ರಿಗಳಾಗಿದ್ದಿರಿ ಅನ್ನುತ್ತಾರೆ.
ಯಾವ ಇತಿಹಾಸ ಹೇಳುತ್ತಿದ್ದೀರಿ?: ಸಿದ್ದರಾಮಯ್ಯ ಕೇವಲ 4 ವರ್ಷಗಳ ಅವಧಿಗೆ ಸಿಎಂ ಆಗಿದ್ದರೇ? ಅಸಲಿಗೆ, ಸಿದ್ದರಾಮಯ್ಯ 2013 ರಿಂದ 2018 ವರೆಗಿನ ಪೂರ್ಣಾವಧಿಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಆಮೇಲೆ ಅಶೋಕ, ಕಾಂಗ್ರೆಸ್ ಸರ್ಕಾರಗಳು ರಾಜ್ಯವನ್ನು 50 ವರ್ಷಗಳ ಕಾಲ ಆಳಿವೆ. ಆದರೆ ಬಿಜೆಪಿ ಸರ್ಕಾರಗಳು ಕೇವಲ 9 ವರ್ಷ ಮಾತ್ರ. ಹಾಗಾಗಿ ಅಭಿವೃದ್ಧಿ ಅಂತ ಹೇಳುತ್ತಾ ಮಾತು ಮುಂದುವರಿಸಿದಾಗ, ಸಿದ್ದರಾಮಯ್ಯ ಅವರಿಗೆ ರೇಗುತ್ತದೆ. ಯಾವ ಇತಿಹಾಸ ಹೇಳುತ್ತಿದ್ದೀರಿ, ಹೇಳಿದ್ದನ್ನೇ ಹೇಳ್ತೀರಲ್ಲ ಅನ್ನುತ್ತಾ ಸಭಾಧ್ಯಕ್ಷರ ಕಡೆ ತಿರುಗಿ, ತಾನು ಇವರ ಮಾತಿಗೆ ಪ್ರತಿಕ್ರಿಯೆ ನೀಡುವುದಿಲ್ಲವೆಂದು ಹೇಳಿದರು.
ಇದನ್ನೂ ಓದಿ: ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸರ್ಕಾರ ಬದ್ಧ, ಪ್ರತ್ಯೇಕ ರಾಜ್ಯದ ಬೇಡಿಕೆ ಸಲ್ಲದು: ಸಿಎಂ