ಬೆಳಗಾವಿ: ಮಹಾರಾಷ್ಟ್ರದವರು ಚೀನಾದಂತೆ ಆಕ್ರಮಣ ಮಾಡಲು ಮುಂದಾದರೆ ಕನ್ನಡಿಗರು ಭಾರತೀಯ ಸೇನೆಯಂತೆ ಆಕ್ರಮಣಕಾರರನ್ನು ಹಿಮ್ಮೆಟ್ಟಿಸುತ್ತೇವೆ ಎಂದು ಉದ್ಧಟತನದ ಹೇಳಿಕೆ ಕೊಟ್ಟಿರುವ ಮಹಾರಾಷ್ಟ್ರ ಪ್ರತಿಪಕ್ಷ ನಾಯಕರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಸುವರ್ಣಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದ ಪ್ರತಿ ಪಕ್ಷದಲ್ಲಿರುವ ನಾಯಕರು ಶಾಸಕಾಂಗ ಸಭೆಯಲ್ಲಿ ಮತ್ತು ಹೊರಗಡೆ ಬಹಳ ಹದ್ದುಮೀರಿ ಅಸಂಬದ್ಧ ಹೇಳಿಕೆ ಕೊಡೋದನ್ನ ನೋಡಿದರೆ ಅವರು ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ ಎನಿಸುತ್ತದೆ ಎಂದರು.
ದೇಶದ ಗಡಿಯೊಳಗೆ ಇತ್ತೀಚೆಗೆ ಚೀನಾ ನಡೆಸಿದ ರೀತಿಯಲ್ಲಿ ಆಕ್ರಮಣ ಮಾಡುತ್ತೇವೆ ಅಂತ ಶಿವಸೇನೆ ನಾಯಕ ಸಂಜಯ್ ರಾಔತ್ ಹೇಳಿದ್ದಾರೆ. ಅವರಿಗೆ ಗೊತ್ತಿಲ್ಲ ಈ ಕಡೆ ಭಾರತ ದೇಶವಿದೆ ಅಂತ. ನಮ್ಮ ಸೈನಿಕರು ಹೇಗೆ ಚೀನಾವನ್ನು ಹಿಮ್ಮೆಟ್ಟಿಸಿದ್ದಾರೋ ಹಾಗೇ ನಾವೆಲ್ಲ ಕನ್ನಡಗಿರು ಇವರನ್ನು ಹಿಮ್ಮೆಟ್ಟಿಸುತ್ತೇವೆ. ಆಕ್ರಮಣ ಮಾಡಲು ಇದೊಂದು ದೇಶವಲ್ಲ, ನಾವೆಲ್ಲ ಒಂದೇ ದೇಶದಲ್ಲಿ ಇದ್ದೇವೆ ಎಂದು ಟಾಂಗ್ ಕೊಟ್ಟರು.
ಆದರೂ ಅವರು ಆ ಭಾಷೆಯನ್ನು ಬಳಿಸಿರೊದಕ್ಕೆ ಉತ್ತರ ಕೊಡಬೇಕಿದೆ. ನಾನು ಇದನ್ನ ಕೇಂದ್ರ ಗೃಹ ಸಚಿವರ ಗಮನಕ್ಕೆ ತರುತ್ತೇನೆ. ನಮಗೆಲ್ಲ ಹೇಳಿದಂತೆ ಎರಡು ಕಡೆ ಶಾಂತಿ ತರುವ ಕೆಲಸವನ್ನು ಕರ್ನಾಟಕ ಮಾಡಿದೆ. ಯಾವುದೇ ರೀತಿ ಗೊಂದಲದ ಘಟನೆಯಾಗದಂತೆ ನೋಡಿಕೊಂಡಿದ್ದೇವೆ. ಅವರು ಬರೋದನ್ನು ಸಹ ತಡೆದಿದ್ದೇವೆ. ಶಾಂತಿ ಭಂಗಕ್ಕೆ ಯಾವುದೇ ಅವಕಾಶ ಕೊಟ್ಟಿಲ್ಲ. ನಾಳೆ ವಿಧಾನಸಭೆಯಲ್ಲಿ ಇದಕ್ಕೆ ಸುದೀರ್ಘವಾಗಿ ಉತ್ತರ ಕೊಡುತ್ತೇನೆ ಎಂದು ಸಿಎಂ ತಿಳಿಸಿದರು.
ಇದೇ ವಿಚಾರದ ಮೇಲೆ ರಾಜಕಾರಣ ಮಾಡಲು ಹೊರಟಿದ್ದಾರೆ. ಅದರೆ, ಇದು ಸಾಧ್ಯವಾಗಲ್ಲ. ಈ ಹಿಂದೆ ಕೂಡ ಎನ್ಸಿಪಿ ನಾಯಕರು ರಾಜಕೀಯ ಮಾಡಲು ಹೋಗಿ ವಿಫಲರಾಗಿದ್ದಾರೆ. ಈಗಲೂ ಸಹ ವಿಫಲರಾಗುತ್ತಾರೆ. ಎರಡು ಕಡೆ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಯಿಂದ ಬಸ್ಗಳ ಒಡಾಟ ಸುಲಲಿತವಾಗಿ ನಡೆಯುತ್ತಿರುವ ವೇಳೆ ಮಂಗಳವಾರ ಅವರೆಲ್ಲಾ ಗಡಿಗೆ ಬರುವ ಪ್ರಯತ್ನ ಮಾಡಿದ್ದರು. ಆದರೆ, ಅವರಿಗೆ ಜನ ಬೆಂಬಲ ಸಿಗಲಿಲ್ಲ. ರಾಜಕೀಯ ಪಕ್ಷಗಳ ಧ್ವಜವನ್ನು ಹಿಡಿದುಕೊಂಡು ಬಂದಿದ್ದು, ನೋಡಿದರೆ ಇದು ರಾಜಕೀಯ ಪ್ರೇರಿತ ಅನ್ನಿಸುತ್ತದೆ ಎಂದರು.
ನಾವು ನಮ್ಮ ಪಕ್ಷದ ನಾಯಕರ ಜೊತೆ ಈಗಾಗಲೇ ಮಾತನಾಡಿದ್ದೇವೆ. ನೀವು ಅಲ್ಲಿನ ನಾಯಕರ ಜೊತೆ ಮಾತನಾಡಿ ಎಂದು ನಾನು ಇಲ್ಲಿನ ಕಾಂಗ್ರೆಸ್ ನಾಯಕರಿಗೆ ಹೇಳೋಕೆ ಇಷ್ಟಪಡುತ್ತೇನೆ. ಇದು ಬೀದಿಯಲ್ಲಿ ಇತ್ಯರ್ಥವಾಗುವ ಕೆಲಸವಲ್ಲ. ಮಹಾರಾಷ್ಟ್ರದವರೇ ಸುಪ್ರೀಂಕೋರ್ಟ್ಗೆ ಹೋಗಿರೋದು. ಹೀಗಾಗಿ ಅವರ ಕೇಸ್ ವೀಕ್ ಆಗಿದೆ ಅನ್ನೋದು ಗೊತ್ತಾಗಿದೆ. ಈ ಸಂದರ್ಭವನ್ನು ಉಪಯೋಗಿಸಿಕೊಂಡು ಲಾಭ ಪಡೆಯಲು ಹೊಗುತ್ತಿದ್ದಾರೆ ಅಷ್ಟೇ. ಈ ಪ್ರಯತ್ನ ಯಶಸ್ವಿಯಾಗಲ್ಲ. ಇದು ಅಪ್ರಬುದ್ಧತೆಯ ಪ್ರದರ್ಶನ ಎಂದು ವಾಗ್ದಾಳಿ ನಡೆಸಿದರು.
ಮಹಾರಾಷ್ಟ್ರ ಸದಸ್ಯರೊಬ್ಬರು ಕರ್ನಾಟಕಕ್ಕೆ ನೀರು ಬಿಡೋದಿಲ್ಲ, ಅಣೆಕಟ್ಟು ಎತ್ತಿರುಸುತ್ತೇವೆ ಎಂಬ ಹೇಳಿಕೆ ನೀಡಿದ್ದಾರೆ. ಇದನ್ನ ಒಬ್ಬರು ಸದಸ್ಯರು ಹೇಳಿದ್ದಾರೆ. ನಾವು ಒಕ್ಕೂಟದ ವ್ಯವಸ್ಥೆಯಲ್ಲಿದ್ದೇವೆ. ಹಿಂದೆ ನೀರಾವರಿ ಸಚಿವರಿದ್ದವರು ನನ್ನ ಬಳಿ ಎರಡ್ಮೂರು ಬಾರಿ ಬಂದಿದ್ದಾರೆ. ಅವರು ರಾಜಕೀಯ ಹೇಳಿಕೆಯನ್ನ ಕೊಡುತ್ತಿದ್ದಾರೆ ಅಷ್ಟೇ. ಯಾವ ನೀರನ್ನೂ ಸಹ ನಿಲ್ಲಿಸಲು ಸಾಧ್ಯವಿಲ್ಲ, ನಮ್ಮಿಂದ ಆಂಧ್ರಕ್ಕೆ ಹೋಗುತ್ತದೆ, ನಿಲ್ಲಿಸಲು ಸಾಧ್ಯನಾ? ಅತಿ ಹೆಚ್ಚು ಮಳೆ ಬಂದಾಗ ಇಟ್ಟುಕೊಂಡು ಏನು ಮಾಡ್ತೀರಾ? ಯಾವುದು ಆಗೋದಿಲ್ಲ. ಆಲಮಟ್ಟಿ ಡ್ಯಾಮ್ ಎತ್ತರ 574.5 ಮೀಟರ್ಗೆ ಹೆಚ್ಚಿಸುವ ವಿಷಯ ನಮ್ಮ ಟ್ರಿಬುನಲ್ನಲ್ಲಿದೆ. ನೋಟಿಫಿಕೆಷನ್ ಆದ ತಕ್ಷಣ ಆ ಕಾರ್ಯ ಸಹ ಪ್ರಾರಂಭವಾಗಲಿದೆ ಎಂದರು.
ಇದನ್ನೂ ಓದಿ: ಶಿವಸೇನೆಯ ಸಂಜಯ್ ರಾವತ್ ಅವರದ್ದು ಬೇಜವಾಬ್ದಾರಿ ಹೇಳಿಕೆ: ಗೃಹ ಸಚಿವ ಆರಗ ಜ್ಞಾನೇಂದ್ರ