ಬೆಳಗಾವಿ: ಜೀವನೋಪಾಯ ಮತ್ತು ಉದ್ಯಮಶೀಲತೆ ಇಲಾಖೆಯಿಂದ ಬೆಳಗಾವಿಯ ಸರ್ದಾರ್ ಮೈದಾನದಲ್ಲಿ ಆಯೋಜಿಸಿರುವ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.
ನಂತರ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಒಬ್ಬ ಹೆಣ್ಣು ಸಂಸಾರವನ್ನೂ ಸುಖವಾಗಿಸಿಕೊಂಡು ಮನೆಯ ಎಲ್ಲ ಕೆಲಸಗಳನ್ನು ಮಾಡುವುದು ಸುಲಭದ ಮಾತಲ್ಲ. ಹೆಣ್ಣು ಎನ್ನುವ ತಾಯಿಯ ಶ್ರಮಕ್ಕೆ ಯಾವತ್ತೂ ಮೌಲ್ಯ ಕಟ್ಟಬೇಕು. ಮಹಿಳೆಯರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕು ಎಂಬ ದೃಷ್ಟಿಯಿಂದ ನಮ್ಮ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರ ಪರಿಶ್ರಮ ಬಹಳ ಇದೆ.
ಆದರೆ, ಮಹಿಳೆಯರಿಗೆ ಪುರುಷರ ಸಮಾನ ಸ್ಥಾನಮಾನ ಸಿಗುತ್ತಿಲ್ಲ. ಈ ವರ್ಷ ಸ್ತ್ರೀ ಸಾಮರ್ಥ್ಯ ಯೋಜನೆ ತಂದಿದ್ದೇವೆ. ಐದು ಲಕ್ಷ ಮಹಿಳೆಯರು ಈ ಯೋಜನೆ ಲಾಭ ಪಡೆದಿದ್ದಾರೆ. ಬರುವ ವರ್ಷದಲ್ಲಿ ಐದು ಕಡೆ ಶಾಶ್ವತ ವಸ್ತು ಪ್ರದರ್ಶನ ಕೇಂದ್ರಗಳ ಸ್ಥಾಪನೆ ಮಾಡಲಾಗುವುದು ಎಂದು ತಿಳಿಸಿದರು.
ಸಚಿವ ಅಶ್ವತ್ಥ ನಾರಾಯಣ ಮಾತನಾಡಿ, ಎಲ್ಲರನ್ನು ಆರ್ಥಿಕರಾಗಿ ಸಬಲರಾಗಿಸಬೇಕು ಎಂಬ ನಿಟ್ಟಿನಲ್ಲಿ ಹಾಗೂ ಸಮಾಜದ ಏಳಿಗೆ ನಮ್ಮ ಸರ್ಕಾರದ ಗುರಿ. ಜೀವನೋಪಾಯಕ್ಕೆ ನಮ್ಮ ಸರ್ಕಾರದಿಂದ ಸಾವಿರ ಕೋಟಿ ನೀಡಲಾಗಿದೆ. ಸ್ತ್ರೀ ಸಾಮರ್ಥ್ಯ ಯೋಜನೆ ಘೋಷಣೆ ಮಾಡಿ 500 ಕೋಟಿ ಸ್ವಸಹಾಯ ಗುಂಪುಗಳಿಗೆ ಹಣ ಬಿಡುಗಡೆ ಮಾಡಲಾಗಿದೆ. ಹಲವಾರು ಸಂಘಟನೆಗಳ ಮೂಲಕ ಸ್ವ ಸಾಹಾಯ ಗುಂಪುಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ: ಸ್ಟಾರ್ಟ್ ಅಪ್ ನೀತಿ, ಸ್ಕ್ರ್ಯಾಪ್ ನೀತಿಗೆ ಸಂಪುಟ ಸಭೆಯಲ್ಲಿ ಅನುಮೋದನೆ