ಬೆಳಗಾವಿ : ಕೆಲವರು ನಾನೇ ಜನವರಿ 14ರ ನಂತರ ಮುಖ್ಯಮಂತ್ರಿ ಆಗ್ತೇನಿ ಅಂತಾ ಹೇಳಿಕೊಂಡ ಓಡಾಡುತ್ತಿದ್ದಾರೆ. ಆ ರೀತಿ ಹೇಳಿಕೊಂಡು ಓಡಾಡುವವರ ಬಾಯಿಗೆ ಬೀಗ ಹಾಕಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ನಗರದಲ್ಲಿ ನಡೆದ ಪಂಚಮಸಾಲಿ ಸಮುದಾಯದ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವುದೇ ಒಂದು ಸಮುದಾಯವನ್ನ ಪಟ್ಟಿಗೆ ಸೇರಿಸಲು ಒಂದು ಪ್ರಕ್ರಿಯೆ ಇದೆ. ಆ ಪ್ರಕ್ರಿಯೆ ಮುಗಿಸಿ ಮಾರ್ಚ್ ಬಜೆಟ್‌ನೊಳಗೆ ಎಲ್ಲಾ ಸಮುದಾಯಗಳಿಗೆ ಕ್ಯಾಬಿನೆಟ್‌ನಲ್ಲಿ ನಿರ್ಣಯ ಮಾಡುತ್ತೇನೆ ಅಂದಿದ್ದಾರೆ.
ಇಂದು ಇತಿಹಾಸ ಯಾವುದು ಚರ್ಚೆ ಮಾಡಿಲ್ಲ. ಅಂತಿಮ ಹಂತದ್ದು ಮಾತ್ರ ಚರ್ಚೆ ಮಾಡಿದ್ದೇವೆ. ಜಗದೀಶ್ ಶೆಟ್ಟರ್, ಯಡಿಯೂರಪ್ಪ ಅವರಿಗೆ ಮಾಡಬೇಕು ಅನ್ನುವ ಭಾವನೆ ಇರಲಿಲ್ಲ. ಬೊಮ್ಮಾಯಿ ಅವರಿಗೆ ಮಾಡಬೇಕು ಅನ್ನೋ ಭಾವನೆ ಇದೆ. ಕಾನೂನಾತ್ಮಕವಾಗಿ ನಾವು ಮೀಸಲಾತಿ ಮಾಡಿಕೊಳ್ಳುತ್ತಿದ್ದೇವೆ. ಅದಕ್ಕೆ ವಿಳಂಬ ಆಗುತ್ತಿದೆ ಎಂದರು.
ಸಚಿವ ಮುರುಗೇಶ್ ನಿರಾಣಿ ಸಭೆಗೆ ಗೈರು ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಗೈರು ಆದವರು ಮುಂದಿನ ಸಲ ಮನೆಯಲ್ಲಿ ಮಲಗುತ್ತಾರೆ. ಹೀಗಾಗಿ, ಗೈರಾಗಿದ್ದಾರೆ ಅಂತಾ ನಿರಾಣಿಗೆ ಯತ್ನಾಳ್ ಟಾಂಗ್ ನೀಡಿದರು. ನಮ್ಮ ಹೋರಾಟದಿಂದ ಎಲ್ಲ ಸಮುದಾಯಗಳಿಗೂ ನ್ಯಾಯ ಸಿಗುತ್ತದೆ. ಏನೂ ಗಡುವು ಇಲ್ಲ. ಅದಕ್ಕಿಂತ ಮುನ್ನವೇ ಸಿಎಂ ಮೀಸಲಾತಿ ಮಾಡ್ತಾರೆ ಎಂದರು.
ಓದಿ: ಚುನಾವಣಾ ಸುಧಾರಣೆ ಮಸೂದೆ ಅನುಮೋದನೆ.. ಆಧಾರ್ಗೆ ವೋಟರ್ ಲಿಂಕ್ ಜೋಡಿಸಲು ಹೀಗೆ ಮಾಡಿ..
ಜನವರಿ ನಂತರ ರಾಜಕೀಯ ಬದಲಾವಣೆ ಆಗುತ್ತಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಯತ್ನಾಳ್, ವ್ಯಕ್ತಿಯೊಬ್ಬ ರಾಜ್ಯದ ಮಹಾನ್ ನಾಯಕರನ್ನ ಎಲ್ಲ ರೀತಿಯಲ್ಲಿ ಸಂತೃಪ್ತಿ ಪಡೆಸಿದ್ದಾನಂತೆ. ಅವರಿಗೆ ಸಕಲ ಐಶ್ವರ್ಯ, ಭೋಗಗಳನ್ನ ದಯಪಾಲಿಸಿದ್ದಾರಂತೆ. ಜನವರಿ 14ರ ನಂತರ ಮುಖ್ಯಮಂತ್ರಿ ಆಗ್ತೇನಿ ಅಂತಾ ಹುಚ್ಚನಂತೆ ಹೇಳಿಕೊಂಡು ಓಡಾಡುತ್ತಿದ್ದಾನೆ.
ಆದ್ರೆ, ನಮ್ಮ ಪ್ರಧಾನಮಂತ್ರಿಗಳು ಬಹಳ ಗಟ್ಟಿಯಾಗಿದ್ದಾರೆ. ಯಾವುದೇ ಆಸೆ, ಆಮಿಷಗಳಿಗೆ ಒಳಗಾಗಿ ಸಿಎಂ ಬದಲಾವಣೆ ಆಗುವುದಿಲ್ಲ. ಆ ರೀತಿ ಹೇಳಿಕೊಂಡು ಓಡಾಡುವವರ ಬಾಯಿಗೆ ಬೀಗ ಹಾಕಬೇಕು. ಅಂತವರು ಮುಖ್ಯಮಂತ್ರಿ ಆದ್ರೆ ದೊಡ್ಡ ಅನಾಹುತ ಆಗುತ್ತೆ ಅಂತಾ ಶಾಸಕಾಂಗ ಸಭೆಯಲ್ಲಿ ಎಚ್ಚರಿಕೆ ಕೊಟ್ಟಿದ್ದೇನೆ ಎನ್ನುವ ಮೂಲಕ ಪರೋಕ್ಷವಾಗಿ ಸಚಿವ ಮುರುಗೇಶ್ ನಿರಾಣಿ ವಿರುದ್ಧ ಯತ್ನಾಳ್ ವಾಗ್ದಾಳಿ ನಡೆಸಿದರು.
ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನಾ ರ್ಯಾಲಿ ವಿಚಾರಕ್ಕೆ ಪ್ರತಿಕ್ರಿಯಿಸಿ, 40 ಪರ್ಸಂಟೇಜ್ ಜನಕರಿದ್ದವರು ಇವತ್ತು ಇಲ್ಲ. ಇದ್ರಲ್ಲಿ ಕಾಂಗ್ರೆಸ್ನ ಇಬ್ಬರು ಮೂವರು ನಾಯಕರಿಗೂ ತಿಂಗಳಿಗೆ ಪಾಲು ಹೋಗುತ್ತಿತ್ತು. ಕಾಂಗ್ರೆಸ್ ನಾಯಕರ ಮನೆಯಲ್ಲೇ ಈ ಕಮೀಷನ್ ಫಿಕ್ಸ್ ಆಗುತ್ತಿತ್ತು. ರಾಜ್ಯದ ಅತ್ಯಂತ ಮುಖ್ಯ ನಾಯಕರಿಗೂ ಪಾಲು ಹೋಗಿದೆ.
ಮತಾಂತರ ಮಸೂದೆ ಕಾಯ್ದೆ ಇನ್ನೂ ಅಧ್ಯಯನ ಮಾಡುತ್ತಿದ್ದಾರೆ. ಮುಂದಿನ ಅಧಿವೇಶನ ಬೆಂಗಳೂರಿನಲ್ಲಿ ಮತಾಂತರ ಕಾಯ್ದೆ ಪಾಸ್ ಮಾಡಬೇಕಂತಿದೆ. ಸಂವಿಧಾನಾತ್ಮಕವಾಗಿ ರಕ್ಷಾ ಕವಚ ಕೊಟ್ಟು ಮಂಡನೆ ಆಗಲಿದೆ. ಸಿದ್ದರಾಮಯ್ಯನವರದ್ದು ಟಿಪ್ಪು ಸುಲ್ತಾನ್ ಹೊಗಳುವುದರಲ್ಲೇ ಅವರ ಜೀವನ ಹೋಗಿದೆ.
ರಾಜ್ಯ ಸರ್ಕಾರ ದೇಶದಲ್ಲೇ ಭ್ರಷ್ಟಾಚಾರದಲ್ಲಿ ಕುಖ್ಯಾತಿ ಪಡೆದಿದೆ ಎಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ ಆ ಪಕ್ಷದವರದ್ದು ಮತ್ತು ಆ ಮುಖಂಡರದ್ದು ಪಾಲಿದೆ. ತನಿಖೆ ಮಾಡಲಿ ಎಂಬ ಡಿಕೆಶಿಯವರ ಮನೆಗೂ ಸ್ವಂತ ಗಾಡಿ ತೆಗೆದುಕೊಂಡು ಹೋಗಿ ಹಣ ಕೊಟ್ಟು ಬಂದಿದ್ದಾರೆ ಎಂದು ಯತ್ನಾಳ್ ಆರೋಪ ಮಾಡಿದರು.