ಬೆಳಗಾವಿ: ಇಂದಿನಿಂದ ಚೆನ್ನಮ್ಮನ ಕಿತ್ತೂರು ಉತ್ಸವಕ್ಕೆ ಬೆಳ್ಳಿಹಬ್ಬದ ಸಂಭ್ರಮ ಹಿನ್ನೆಲೆ ಕಿತ್ತೂರು ಉತ್ಸವದಲ್ಲಿ ಭಾಗಿಯಾಗಿ ಮೌಢ್ಯ ನಿವಾರಣೆಗೆ ಸಿಎಂ ಬಸವರಾಜ ಬೊಮ್ಮಾಯಿ ಮುಂದಾಗಿದ್ದಾರೆ.
ಕಿತ್ತೂರು ಉತ್ಸವಕ್ಕೆ ಸಿಎಂ ಬಂದ್ರೆ ಅಧಿಕಾರ ಕಳೆದುಕೊಳ್ಳಲಿದ್ದಾರೆ ಎಂಬ ಮೂಢನಂಬಿಕೆ ಕೆಲ ವರ್ಷಗಳಿಂದಲೂ ಚಾಲ್ತಿಯಲ್ಲಿದೆ. ಹೀಗಾಗಿ ಸಿಎಂ ಆದವರು ಕಿತ್ತೂರು ಉತ್ಸವಕ್ಕೆ ಬರುತ್ತಿರಲಿಲ್ಲ. ಆದ್ರೆ ಇಂದು ನಡೆಯಲಿರುವ ಉತ್ಸವದಲ್ಲಿ ಸಿಎಂ ಬೊಮ್ಮಾಯಿ ಭಾಗಯಾಗಲಿದ್ದಾರೆ.
1997ರಲ್ಲಿ ರಾಜ್ಯ ಸರ್ಕಾರದ ವತಿಯಿಂದ ಕಿತ್ತೂರು ಉತ್ಸವಕ್ಕೆ ಅಂದಿನ ಸಿಎಂ ಜೆ.ಹೆಚ್. ಪಟೇಲ್ ಅವರು ಚಾಲನೆ ನೀಡಿದ್ದರು. ಜೆ.ಹೆಚ್.ಪಟೇಲ್ ಬಳಿಕ ಯಾವೊಬ್ಬ ಸಿಎಂ ಸಹ ಕಿತ್ತೂರು ಉತ್ಸವಕ್ಕೆ ಚಾಲನೆ ನೀಡಲು ಬಂದಿರಲಿಲ್ಲ. 2012ರ ಅ.25ರಂದು ಕಿತ್ತೂರು ಉತ್ಸವ ಸಮಾರೋಪ ಸಮಾರಂಭಕ್ಕೆ ಬಂದಿದ್ದ ಅಂದಿನ ಸಿಎಂ ಜಗದೀಶ್ ಶೆಟ್ಟರ್ ಅವರು ಇದೇ ವೇದಿಕೆಯಲ್ಲಿ ಕಿತ್ತೂರು ತಾಲೂಕು ಘೋಷಣೆ ಮಾಡಿದ್ದರು.
ಇದಾದ ಬಳಿಕ ಜಗದೀಶ್ ಶೆಟ್ಟರ್ ಅಧಿಕಾರ ಕಳೆದುಕೊಂಡಿದ್ದರು. ಇದಲ್ಲದೇ ಈ ಹಿಂದೆ ಸಿಎಂ ಆಗಿದ್ದಾಗ ಯಡಿಯೂರಪ್ಪ ಕಿತ್ತೂರು ಉತ್ಸವಕ್ಕೆ ಬಂದರೂ ಕೇವಲ ಹೆದ್ದಾರಿ ಬದಿ ಇರುವ ಚೆನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿ ತೆರಳಿದ್ದರು.
ಕಿತ್ತೂರಿಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ
ಹಿಂದೆ ಗೃಹ ಸಚಿವರಾಗಿದ್ದಾಗ ಬಸವರಾಜ ಬೊಮ್ಮಾಯಿ ಪೊಲೀಸ್ ವಸತಿ ಸಮುಚ್ಛಯ ಉದ್ಘಾಟನೆಗೆ ಆಗಮಿಸಿದ್ದರು. ಕಿತ್ತೂರು ಭೇಟಿ ಬಳಿಕ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾರೆ. ವಿಶೇಷವೆಂದರೆ ನರೇಂದ್ರ ಮೋದಿ ಗುಜರಾತ್ ಸಿಎಂ ಆಗಿದ್ದಾಗ ಕಿತ್ತೂರಿಗೆ ಭೇಟಿ ನೀಡಿದ್ದರು. ಈ ಭೇಟಿ ಬಳಿಕ ಅವರು ಪ್ರಧಾನಿಯೂ ಆದರು.
ಇದಲ್ಲದೇ ಹೆಚ್.ಡಿ ದೇವೇಗೌಡರು ಸಹ ಕಿತ್ತೂರು ಭೇಟಿ ನೀಡಿದ ಬಳಿಕವೇ ಪ್ರಧಾನಿಯಾಗಿದ್ದರು. ದೇವೇಗೌಡರ ಭೇಟಿಯ ಬಳಿಕ ಚುನಾವಣೆ ನಡೆದು, ಜನತಾ ಪರಿವಾರದ ಮೂಲಕ ಪ್ರಧಾನಿ ಹುದ್ದೆ ಅಲಂಕರಿಸಿದ್ದರು.
ಇದನ್ನೂ ಓದಿ: ಉಪಚುನಾವಣೆ: ಹೀಗಿದೆ ಹಾನಗಲ್ ಅಖಾಡದ ರಾಜಕೀಯ ಇತಿಹಾಸ