ಬೆಳಗಾವಿ: ಸುವರ್ಣಸೌಧದಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ ನಡೆಯಲಿದೆ. ಈ ಹಿನ್ನೆಲೆ ಸಿಎಂ ಬಸವರಾಜ ಬೊಮ್ಮಾಯಿ ಬೆಂಗಳೂರಿನಿಂದ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಸುವರ್ಣಸೌಧದ ಸಭಾಂಗಣದಲ್ಲಿ ನಡೆಯಲಿರುವ ಸಾವರ್ಕರ್ ಸೇರಿದಂತೆ ಮಹನೀಯರ ಫೋಟೋ ಅನಾವರಣ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸಿಎಂ, ಬೆಳಗಾವಿಯಲ್ಲಿ ಇಂದಿನಿಂದ ಅಧಿವೇಶನ ಪ್ರಾರಂಭ ಆಗ್ತಿದೆ. ಈ ಭಾಗದ ಜನರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿ ಪರಿಹಾರ ನೀಡಬೇಕು. ಎಲ್ಲರ ಸಹಕಾರದೊಂದಿಗೆ ಒಳ್ಳೆಯ ರೀತಿಯ ಚರ್ಚೆ ನಡೆಯಬೇಕು ಎಂದರು.
ವಿಧಾನಸಭೆ ಸಭಾಂಗಣದಲ್ಲಿ ಮಹನೀಯರ ಫೋಟೋ ಅನಾವರಣಕ್ಕೆ ಕಾಂಗ್ರೆಸ್ ಆಕ್ಷೇಪ ವಿಚಾರವಾಗಿ ಮಾತನಾಡಿದ ಅವರು, ಮಹನೀಯರ ಫೋಟೋ ಅಳವಡಿಕೆ ಸ್ಪೀಕರ್‌ಗೆ ಬಿಟ್ಟ ವಿಚಾರ. ಈ ಸಂಬಂಧ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನನಗೆ ಪತ್ರ ಬರೆದಿರುವುದು ಗಮನಕ್ಕೆ ಬಂದಿಲ್ಲ. ಈ ಕುರಿತು ಸ್ಪೀಕರ್ ಹಾಗೂ ಸಿದ್ದರಾಮಯ್ಯ ಜೊತೆ ಮಾತನಾಡುತ್ತೇನೆ ಎಂದು ತಿಳಿಸಿದರು.
ಮಾಜಿ ಸಚಿವ ಈಶ್ವರಪ್ಪರಿಂದ ಸದನ ಬಹಿಷ್ಕಾರ ವಿಚಾರವಾಗಿ ಮಾತನಾಡಿ, ನೀವು ಅದನ್ನೆಲ್ಲಾ ಸೃಷ್ಟಿ ಮಾಡಿಕೊಂಡು ಹೇಳಬೇಡಿ, ನಾನು ಈಶ್ವರಪ್ಪನವರ ಜೊತೆ ಮಾತನಾಡುತ್ತೇನೆ ಎಂದು ಗರಂ ಆದರು.
ಇದನ್ನೂ ಓದಿ: ಗಾಂಧೀಜಿ ಸಾವಿನಲ್ಲಿ ಸಾವರ್ಕರ್ ಕೈವಾಡವಿದೆ, ಸದನದಲ್ಲಿ ಅವರ ಫೋಟೋ ಅಗತ್ಯವಿಲ್ಲ: ಸಿದ್ದರಾಮಯ್ಯ