ಬೆಳಗಾವಿ : ಬೆಳಗಾವಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 2,200 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಬೆಳಗಾವಿಗೆ ಬೆಳಕು ತಂದಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೊಂಡಾಡಿದರು.
ನರೇಂದ್ರ ಮೋದಿ ಅವರಿಗೆ ಬೆಳಗಾವಿ ಜನರು ಸ್ಮರಣೀಯ ಸ್ವಾಗತ ಕೋರಿದ್ದೀರಿ. ನಿಮಗೆ ನಾನು ಧನ್ಯವಾದ ಸಲ್ಲಿಸುತ್ತೇನೆ. ವಿಶ್ವದಲ್ಲಿಯೇ ಮೊದಲ ಬಾರಿಗೆ ರೈತರ ಖಾತೆಗಳಿಗೆ ನೇರವಾಗಿ ಹಣ ಹಾಕುತ್ತಿರುವುದು ನರೇಂದ್ರ ಮೋದಿಯವರು, ಇದರಿಂದ ರೈತರಿಗೆ ಅನುಕೂಲವಾಗುತ್ತಿದೆ. ಸರ್ಕಾರವು ರೈತರ ಪರವಾಗಿದೆ. ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಇರುವುದರಿಂದಲೇ ಅಭಿವೃದ್ಧಿ ಆರಂಭವಾಗಿದೆ. ರಾಜ್ಯದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಬೆಳೆವಿಮೆಗೆ ಅತಿ ಹೆಚ್ಚು ರೈತರು ಫಲಾನುಭವಿಗಳಾಗಿದ್ದಾರೆ ಎಂದು ತಿಳಿಸಿದರು.
ಕಳೆದ ಐದು ವರ್ಷದಲ್ಲಿ ರಾಜ್ಯಕ್ಕೆ ಆರು ಸಾವಿರ ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿ ರಸ್ತೆಯನ್ನು ಕೇಂದ್ರ ಸರ್ಕಾರ ನೀಡಿದೆ. ಅಸಾಧ್ಯ ಎಂಬುದನ್ನು ಮೋದಿಯವರು ಸಾಧ್ಯವಾಗಿಸಿದ್ದಾರೆ. ಮನೆ ಮನೆಗೆ ನೀರು ಕೊಟ್ಟಿರುವ ಪ್ರಧಾನಿ ಇದ್ದರೆ ಅದು ಮೋದಿ. ಅವರು ಜಲ ಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಪ್ರತಿ ಮನೆಗೆ ನೀರು ನೀಡಿದ್ದಾರೆ. ಇವರು ಆಧುನಿಕ ಭಗೀರಥ ಎಂದು ಹೇಳಿದರು. ಈ ಬಗ್ಗೆ ಹಿಂದಿನ ಪ್ರಧಾನಿಗಳು ಯಾವುದೇ ಧೈರ್ಯ ಮಾಡಿರಲಿಲ್ಲ. ಆದರೆ ಮೋದಿ ಅವರು ಪ್ರತಿ ಮನೆಗೆ ನೀರು ಕೊಟ್ಟಿದ್ದಾರೆ. ದೂರದೃಷ್ಟಿಯ ನಾಯಕರು ನಮಗೆ ಸಿಕ್ಕಿರುವುದು ನಮ್ಮ ಪುಣ್ಯ ಎಂದು ಬೊಮ್ಮಾಯಿ ಅಭಿಪ್ರಾಯಪಟ್ಟರು.
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಕಿಸಾನ್ ಸಮ್ಮಾನ್ ಯೋಜನೆಯಿಂದ ರೈತರ ಖಾತೆಗೆ ನೇರವಾಗಿ ಮೋದಿ ಅವರು ಹಣ ಜಮಾ ಮಾಡಿದ್ದಾರೆ. 13ನೇ ಕಂತಾಗಿ ದೇಶದಲ್ಲಿ ಒಟ್ಟು 8 ಕೋಟಿ ರೈತರಿಗೆ 16 ಸಾವಿರ ಕೋಟಿ ಹಣವನ್ನು ಬೆಳಗಾವಿಯಿಂದ ದೇಶದ ರೈತರ ಖಾತೆಗಳಿಗೆ ಹಣ ಬಿಡುಗಡೆ ಮಾಡಿದ್ದಾರೆ. ಇದರಿಂದ ರೈತರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು. ಕೃಷಿಯಲ್ಲಿ ಭಾರತ ದೇಶವು ತುಂಬಾ ಬದಲಾವಣೆ ತಂದಿದೆ. ಕೇಂದ್ರ ಸರ್ಕಾರದ ಜೊತೆ ರಾಜ್ಯ ಸರ್ಕಾರ ಸೇರಿ ಹಲವು ಯೋಜನೆಗಳನ್ನು ರೂಪಿಸಿ ರೈತರ ಹಿತ ಕಾಪಾಡಲು ಬದ್ದವಾಗಿದೆ ಇದೇ ವೇಳೆ ತಿಳಿಸಿದರು.
ಬೆಳಗಾವಿ ಬಿಜೆಪಿ ನಾಯಕರಾದ ಸಂಜಯ ಪಾಟೀಲ, ಅಭಯ್ ಪಾಟೀಲ್, ಪ್ರಧಾನಿ ಅವರಿಗೆ ಏಲಕ್ಕಿ ಹಾರ ಹಾಗೂ ಪೇಟಾ ತೊಡಿಸಿದರು. ಸವದತ್ತಿ ಯಲ್ಲಮ್ಮ ದೇವಿಯ ಭಾವಚಿತ್ರ ಮತ್ತು ಹೊಲಿಗೆಯಿಂದ ತಯಾರಾದ ಮೋದಿ ಭಾವಚಿತ್ರವನ್ನು ಸಂಸದೆ ಮಂಗಳಾ ಅಂಗಡಿ, ಸಚಿವೆ ಶಶಿಕಲಾ ಜೊಲ್ಲೆ ಅವರು ಪ್ರಧಾನಿಗೆ ಉಡುಗೊರೆ ನೀಡಿದರು.
ಇದನ್ನೂ ಓದಿ : ಬೆಳಗಾವಿಯಲ್ಲಿ ಪ್ರಧಾನಿ ರೋಡ್ ಶೋ.. ರಸ್ತೆಯುದ್ದಕ್ಕೂ ಮೋದಿಗೆ ಪುಷ್ಪವೃಷ್ಟಿ