ಬೆಳಗಾವಿ: ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳು ಮಧ್ಯೆ ನಡೆದ ಗಲಾಟೆಯಲ್ಲಿ ಕಲ್ಲು ತೂರಾಟ ನಡೆಸಿ ಬಿಗುವಿನ ಸ್ಥಿತಿ ನಿರ್ಮಾಣವಾಗಿರುವ ಘಟನೆ ಖಾನಾಪುರ ತಾಲೂಕಿನ ತೋಪಿನಕಟ್ಟಿ ಗ್ರಾಮದಲ್ಲಿ ನಡೆದಿದೆ. ಈ ಹಿನ್ನೆಲೆ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
ಗುರುವಾರ ರಾತ್ರಿ ಎರಡು ಗುಂಪುಗಳ ಇಬ್ಬರು ಯುವಕರ ನಡುವೆ ಗಲಾಟೆ ನಡೆದಿದ್ದು, ಶುಕ್ರವಾರ ಎರಡು ಗುಂಪುಗಳ ನಡುವೆ ಶಾಸಕ ವಿಠ್ಠಲ ಹಲಗೇಕರ್ ಸಂಧಾನ ಸಭೆ ನಡೆಸಿದರು. ಈ ಸಂದರ್ಭದಲ್ಲಿ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದರು. ಹೀಗಾಗಿ ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಮತ್ತು ಖಾನಾಪುರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಗ್ರಾಮದಲ್ಲಿ ಸದ್ಯ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಮೊಕ್ಕಾಂ ಹೂಡಿದ್ದಾರೆ.
ಘಟನೆ ಕುರಿತು ದಲಿತ ಸಂಘರ್ಷ ಸಮಿತಿ ಮುಖಂಡ ರಾಜಶೇಖರ ಮಾತನಾಡಿ, ನಮ್ಮ ಸಮಾಜದ ಯುವಕರ ಮೇಲೆ ಕೆಲವು ಯುವಕರು ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ನೂರಾರು ಜನರು ಸೇರಿಕೊಂಡು ಕಲ್ಲು ತೂರಾಟ ಕೂಡ ಮಾಡಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಳಿಕೆ : ಖಾನಾಪುರ ಠಾಣೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ್ ಗುಳೇದ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ನಾಲ್ವರು ಜನರ ನಡುವೆ ರಸ್ತೆಯ ವಿಚಾರವಾಗಿ ವಾಗ್ವಾದ ಆಗಿತ್ತು. ಆದರೆ, ಪೊಲೀಸರಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಗುರುವಾರ ಸಂಜೆ ಒಂದು ಕೋಮಿನವರು ಮತ್ತೊಂದು ಕೋಮಿನ ಜಾಗಕ್ಕೆ ಹೋಗಿದ್ದರು. ಹೀಗಾಗಿ ಅಲ್ಲಿ ದ್ವೇಷಮಯ ವಾತಾವಾರಣ ನಿರ್ಮಾಣ ಆಗಿತ್ತು. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದಾಗ ವಿಷಯ ಗಮನಕ್ಕೆ ಬಂದಿದೆ ಎಂದರು.
ಇನ್ನು ಯಾರಿಗಾದರೂ ಹಲ್ಲೆಯಾಗಿದ್ದರೆ ದೂರು ನೀಡಿ ಎಂದು ಪೊಲೀಸರು ಹೇಳಿದ್ದರು. ಬೆಳಿಗ್ಗೆ ಬಂದು ದೂರು ನೀಡ್ತಿವಿ ಎಂದು ಹೇಳಿದ್ದರು. ಆದರೆ, ಹಿಂದಿನ ದಿನ ವಿಡಿಯೋ ಹರಿಬಿಟ್ಟಿದ್ದರಿಂದ ಬೇರೆ ಬೇರೆ ಊರಿನ ಜನರು ತೋಪಿನಕಟ್ಟಿಗೆ ಬಂದರು. ಹೊರಗಡೆ ಊರಿನ ಜನ ಬಂದ ತಕ್ಷಣ ಕಿಡಿಗೇಡಿಗಳು ಮೂರು ಕಲ್ಲುಗಳನ್ನು ಎಸೆದಿದ್ದರು ಎಂದು ಎಸ್ಪಿ ತಿಳಿಸಿದರು.
ಕೆಲವರನ್ನು ವಿಚಾರಣೆ ನಡೆಸಿದಾಗ ಗುಂಪೊಂದರ ಮೇಲೆ ಹಲ್ಲೆ ಆಗ್ತಿದೆ ಎಂದು ಮಾಹಿತಿ ನೀಡಿದರು. ಹಾಗೇನಾದರೂ ಇದ್ದರೆ ನೀವು ಬಂದು ದೂರು ನೀಡಿ ಎಂದು ಹೇಳಿದ್ದೇವು. ಹಲ್ಲೆ ಯತ್ನ ಪ್ರಕರಣವನ್ನು ನಾವು ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿದ್ದೇವೆ. ಸದ್ಯ ಗ್ರಾಮದಲ್ಲಿ ಶಾಂತ ರೀತಿಯ ವಾತಾವರಣ ಇದೆ. ದೂರು ಕೊಟ್ಟ ಬಳಿಕ ಕ್ರಮ ಕೈಗೊಳ್ಳುತ್ತೆವೆ ಎಂದು ಹೇಳಿದರು.
ಇದನ್ನೂ ಓದಿ : ಬೆಂಗಳೂರಿನಲ್ಲಿ ಡಿಎಂಕೆ ಮುಖಂಡನ ಮೇಲೆ ಹಲ್ಲೆ ಪ್ರಕರಣ; ದೃಶ್ಯ ಸಿಸಿಟಿವಿಯಲ್ಲಿ ಸೆರೆ