ಬೆಳಗಾವಿ: ಪೌರತ್ವ ತಿದ್ದುಪಡಿ ಕಾಯಿದೆ ಜಾರಿಯನ್ನು ವಿರೋಧಿಸಿ ಮುಸ್ಲಿಂ ಸಂಘಟನೆಗಳಿಂದ ನಡೆದ ಬೃಹತ್ ಪ್ರತಿಭಟನಾ ರಾಲಿ ಬಳಿಕ ಕಿಡಿಗೇಡಿಗಳು ಬಸ್ ಹಾಗೂ ಟ್ಯಾಂಕರ್‍ಗೆ ಕಲ್ಲು ಎಸೆದ ಘಟನೆ ನಡೆದಿದೆ.
ನಗರದ ಅಶೋಕ ವೃತ್ತದಿಂದ ಡಿಸಿ ಕಚೇರಿವರೆಗೆ ಮುಸ್ಲಿಂ ಸಂಘಟನೆಗಳಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ್ದು, ಮರಳಿ ಮನೆಗೆ ತೆರಳುವಾಗ ಕಿಡಿಗೇಡಿಗಳು ಶಿವಾಜಿ ನಗರದಲ್ಲಿ ಸಂಚರಿಸುತ್ತಿದ್ದ ಬಸ್ ಹಾಗೂ ಟ್ಯಾಂಕರ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಘಟನೆಯಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಬಸ್ ಹಾಗೂ ಟ್ಯಾಂಕರ್‍ಗಳ ಗಾಜುಗಳು ಪುಡಿಪುಡಿಯಾಗಿದ್ದು, ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಘಟನೆಯಿಂದ ಪ್ರಯಾಣಿಕರಿಗೆ ಯಾವುದೇ ಹಾನಿ ಆಗಿಲ್ಲ ಎಂದು ತಿಳಿದು ಬಂದಿದೆ.
ಇನ್ನು ನಗರದ ಸೂಕ್ಷ್ಮ ಹಾಗೂ ಆಯಕಟ್ಟಿನ ಜಾಗಗಳಲ್ಲಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ. ಸ್ಥಳಕ್ಕೆ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಸೀಮಾ ಲಾಟ್ಕರ್ ಹಾಗೂ ಕ್ರೈಮ್ ಡಿಸಿಪಿ ಯಶೋಧಾ ಭೇಟಿ ನೀಡಿದ್ದಾರೆ.