ಬೆಳಗಾವಿ: ಕೊರೊನಾ ಆತಂಕದ ಹಿನ್ನೆಲೆ ಪ್ರತಿ ವರ್ಷದಂತೆ ನಡೆಯುತ್ತಿದ್ದ ಕ್ರಿಸ್‌ಮಸ್ ಆಚರಣೆಗೆ ಬ್ರೇಕ್ ಬಿದ್ದಿದ್ದು, ಕುಂದಾನಗರಿಯಲ್ಲಿ ಸರಳ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಪ್ರಾರ್ಥನೆ ಸಲ್ಲಿಸಿದ ಕ್ರೈಸ್ತ ಭಾಂದವರು, ಒಬ್ಬರಿಗೊಬ್ಬರು ಶುಭಾಶಯ ವಿನಿಮಯ ಮಾಡಿಕೊಂಡು ಕೇಕ್ ಕತ್ತರಿಸಿ ಸಂಭ್ರಮಿಸಿದರು.
ನಗರದ ಕ್ಯಾಥೋಲಿಕ್ ಚರ್ಚ್, ಸೆಂಟ್ರಲ್ ಮೆಥೋಡಿಸ್ಟ್ ಚರ್ಚ್ ಸೇರಿದಂತೆ ಪ್ರಮುಖ ಚರ್ಚ್ಗಳಲ್ಲಿ ಕ್ರೈಸ್ತ ಭಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಪ್ರಮುಖ ಚರ್ಚ್ಗಳಲ್ಲಿ ಸರ್ಕಾರದ ಮಾರ್ಗಸೂಚಿಗಳನ್ವಯ ಕೋವಿಡ್ ನಿಯಮಗಳನ್ನು ಪಾಲಿಸಿದ್ದು, ಪ್ರತಿಯೊಬ್ಬರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡಿದ್ದರು. ಇದಲ್ಲದೇ ಗೇಟ್ ಮುಂಭಾಗದಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿತ್ತು.
ಓದಿ: ನಾಡಿನೆಲ್ಲೆಡೆ ಕ್ರಿಸ್‌ಮಸ್ ಸಂಭ್ರಮ: ಸಾಮಾಜಿಕ ಅಂತರ ಕಾಯ್ದುಕೊಂಡೇ ಚರ್ಚ್‌ನಲ್ಲಿ ಪ್ರಾರ್ಥನೆ
ಈ ವೇಳೆ ಕ್ಯಾಂಪ್ ಪ್ರದೇಶದ ಕ್ಯಾಥೋಲಿಕ್ ಚರ್ಚ್ನ ಬಿಷಪ್ ಡರೆಕ್ ಫರ್ನಾಂಡೀಸ್, ಕ್ರೈಸ್ತ ಬಾಂಧವರಿಗೆ ಕ್ರಿಸ್‌ಮಸ್ ಸಂದೇಶ ನೀಡಿದರು. ಕ್ರಿಸ್‌ಮಸ್ ಎಂದರೆ ಪ್ರೀತಿ, ಬಾಂಧವ್ಯ, ವಿಶ್ವಾಸದ ಸಂಕೇತವಾಗಿದ್ದು, ಕ್ರಿಸ್ತನ ಸಂದೇಶಗಳು ಮನುಕುಲಕ್ಕೆ ಮಾರ್ಗದರ್ಶನ ನೀಡುತ್ತವೆ. ಬಡವರು, ಅನಾಥರು ಹಾಗೂ ಅಶಕ್ತರು ಯಾರೂ ಕೂಡ ಉಪವಾಸದಿಂದ ನರಳುವಂತಾಗಬಾರದು. ಕೊರೊನಾ ತಂದಿರುವ ಸಂಕಷ್ಟ ಎದುರಿಸುವ ಶಕ್ತಿಯನ್ನು ಯೇಸು ಪ್ರಭು ನೀಡಲಿ ಎಂದು ಸಂದೇಶ ನೀಡಿದರು.