ಚಿಕ್ಕೋಡಿ: ಕರ್ನಾಟಕ ಹಾಗೂ ಮಹಾರಾಷ್ಟ್ರದ ಆರಾಧ್ಯ ದೇವತೆಯಾದ ಗಡಿ ಭಾಗದ ಚಿಂಚಲಿ ಶ್ರೀ ಮಾಯಕ್ಕದೇವಿಯು ಲಕ್ಷಾಂತರ ಭಕ್ತಸಮೂಹವನ್ನು ಒಳಗೊಂಡಿದ್ದು, ತಾಯಿಯ ದರ್ಶನಕ್ಕೆ ಎತ್ತಿನಗಾಡಿಯಲ್ಲಿ ಬರುವುದು ವಿಶೇಷ. ಜಾತ್ರೆಯು ಇದೇ ಫೆಬ್ರುವರಿ ಕೊನೆಯ ವಾರ ಹಾಗೂ ಮಾರ್ಚ್ ಮೊದಲವಾರ ನಡೆಯಲಿದ್ದು, ಮಾರ್ಚ 2 ರಂದು ಮಾಯಕ್ಕದೇವಿಯ ಮಹಾನೈವೇದ್ಯ ಜರುಗಲಿದೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದಲ್ಲಿ ನೆಲೆಸಿರುವ ಚಿಂಚಲಿ ಮಾಯಕ್ಕದೇವಿ ಮೂಲವಾಗಿ ಮಹಾರಾಷ್ಟ್ರದ ಭಕ್ತರನ್ನು ಹೆಚ್ಚಾಗಿ ಹೊಂದಿದ್ದು, ಈ ಬಾರಿ ಕೇವಲ ಐದು ದಿನಗಳವರೆಗೆ ಜಾತ್ರೆ ನಡೆಸಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಕೊರೊನಾ ಹಿನ್ನೆಲೆ, ಸುಮಾರು 7-8 ತಿಂಗಳು ಸಾರ್ವಜನಿಕರಿಗೆ ಮಾಯಕ್ಕಾದೇವಿ ದರ್ಶನ ಕೂಡ ಬಂದ್ ಮಾಡಲಾಗಿತ್ತು. ಭಕ್ತರ ಕೋರಿಕೆ ಮೇರೆಗೆ ಸರ್ಕಾರ ಈಗ ಜಾತ್ರೆಗೆ ಅನುಮತಿ ನೀಡಿದೆ. ಚಿಂಚಲಿ ಜಾತ್ರೆ ಮೊದಲು 15-20 ದಿನಗಳವರಗೆ ನಡೆಯುತಿತ್ತು. ಆದರೀಗ ಕೊರೊನಾ ಮಾರ್ಗಸೂಚಿ ಒಳಗೊಂಡು ಕೇವಲ 5 ದಿನಗಳವರಗೆ ಮಾತ್ರ ಜಾತ್ರೆ ನಡೆಸಬೇಕು.
ಈ ಸುದ್ದಿಯನ್ನೂ ಓದಿ: ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ: ಜನರ ಸಮಸ್ಯೆಗಳಿಗೆ ಧ್ವನಿಯಾದ ಡಿಸಿ
ಕರ್ನಾಟಕ ಹಾಗೂ ಮಹಾರಾಷ್ಟ್ರದಿಂದ ಬರುವ ಲಕ್ಷಾಂತರ ಭಕ್ತ ಸಮೂಹಕ್ಕೆ ಯಾವುದೇ ತೊಂದರೆಯಾಗದಂತೆ ಪ್ರತಿವರ್ಷದಂತೆ ಈ ವರ್ಷವೂ ನೋಡಿಕೊಳ್ಳಲಾಗುವುದು. ಮೂಲ ಸೌಕರ್ಯ ಕೂಡಾ ಒದಗಿಸಲಾಗಿದೆ. ಜಾತ್ರೆಗೆ ಬರುವ ಲಕ್ಷಾಂತರ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಕುಡಿಯುವ ನೀರು, ಬೆಳಕಿನ ವ್ಯವಸ್ಥೆ, ಸುಗಮ ಸಂಚಾರಕ್ಕೆ ರಸ್ತೆ, ಪವಿತ್ರ ಸ್ನಾನ ಮಾಡಲು ಹಾಲಹಳ್ಳಕ್ಕೆ ನೀರು ಬಿಡುವುದು ಹಾಗೂ ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಾನೂನು ಸುವ್ಯವಸ್ಥೆ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ರಾಯಬಾಗ ತಹಶೀಲ್ದಾರ್ ಮೋಹನ ಭಸ್ಮೆ ಈಟಿವಿ ಭಾರತಗೆ ಮಾಹಿತಿ ನೀಡಿದರು.