ಚಿಕ್ಕೋಡಿ/ಬೆಳಗಾವಿ: ಬಳ್ಳಾರಿ ಜಿಲ್ಲೆ ವಿಭಜನೆ ನಂತರ ಈಗ ಬೆಳಗಾವಿ ಜಿಲ್ಲೆಯಲ್ಲಿ ಪ್ರತ್ಯೇಕ ಜಿಲ್ಲೆಯ ಕೂಗು ಜೋರಾಗುತ್ತಿದೆ. ಚಿಕ್ಕೋಡಿ ಹಾಗೂ ಗೋಕಾಕ ಎರಡನ್ನೂ ಪ್ರತ್ಯೇಕ ಜಿಲ್ಲೆ ಮಾಡಬೇಕು ಎಂಬ ಹೋರಾಟಕ್ಕೆ ಮತ್ತಷ್ಟು ಬಲ ಬಂದಿದೆ.
ರಾಜ್ಯದಲ್ಲಿ ಆಡಳಿತಾತ್ಮಕವಾಗಿ, ಜನಸಂಖ್ಯಾನುಸಾರವಾಗಿ, ವಿಸ್ತೀರ್ಣಾನುಸಾರವಾಗಿ ಅತ್ಯಂತ ದೊಡ್ಡ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಬೆಳಗಾವಿ ಜಿಲ್ಲೆಯಲ್ಲಿ ಸದ್ಯ 14 ತಾಲೂಕುಗಳಿವೆ. ಬಹುಶಃ ರಾಜ್ಯದ ಬೇರಾವ ಜಿಲ್ಲೆಯಲ್ಲೂ ಇಷ್ಟು ಪ್ರಮಾಣದ ತಾಲೂಕುಗಳು, ಉಪವಿಭಾಗಗಳು ಇರಲಿಕ್ಕಿಲ್ಲ. ಚಿಕ್ಕೋಡಿಯೂ ಸಹ ಪ್ರತ್ಯೇಕ ಜಿಲ್ಲೆಯಾಗಬೇಕು ಎಂಬ ಹಲವಾರು ವರ್ಷಗಳ ಕೂಗಿಗೆ ಸರ್ಕಾರ ಹಾಗೂ ಜನಪ್ರತಿನಿಧಿಗಳ ಸ್ಪಂದನೆ ಇಲ್ಲದ ಕಾರಣದಿಂದ ಜಿಲ್ಲಾ ವಿಭಜನೆಯ ಕನಸು ಕನಸಾಗಿಯೇ ಉಳಿದಿದೆ.
ಸಚಿವ ಆನಂದ ಸಿಂಗ್ ಬೇಡಿಕೆಯಂತೆ ರಾಜ್ಯದ 31 ನೇ ಜಿಲ್ಲೆಯಾಗಿ ವಿಜಯನಗರ ಪ್ರತ್ಯೇಕ ಮತ್ತು ಸ್ವತಂತ್ರ ಜಿಲ್ಲೆಯಾಗಿ ರಚನೆಯಾಗಿದೆ. ಬೆಳಗಾವಿಯ ಮಟ್ಟಕ್ಕೆ ಹೇಳುವುದಾದರೆ ಜಿಲ್ಲಾ ವಿಭಜನೆಗೆ ರಾಜಕೀಯ ಹಿತಾಸಕ್ತಿಯ ಕೊರತೆಯಂತೂ ಎದ್ದು ಕಾಣುತ್ತಿದೆ. ಆದರೆ ಜಿಲ್ಲೆ ವಿಭಜನೆಯಾದರೆ ಆಡಳಿತಾತ್ಮಕವಾಗಿ ಜಿಲ್ಲೆಯ ಜನರಿಗೆ ಅನುಕೂಲವಾಗಲಿದೆ ಎನ್ನುವುದು ಹೋರಾಟಗಾರರು ಹಾಗೂ ಸಮಾಜ ಸೇವಕರ ಮಾತು. ನಮ್ಮ ಕಾಲಮಾನದವರಿಗೆ ಜಿಲ್ಲೆಯಂತೂ ಆಗಲಿಲ್ಲ. ಮುಂದಿನ ಪೀಳಿಗೆಯವರಿಗಾದರೂ ಅನುಕೂಲವಾಗಲಿ ಎಂಬುದು ಚಿಕ್ಕೋಡಿ ಉಪವಿಭಾಗದ ಜನರ ಕೂಗಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಐವರು ಸಚಿವರಿದ್ದು, ಕೇಂದ್ರ ಹಾಗೂ ರಾಜ್ಯದಲ್ಲಿ ಇವರದೇ ಆಡಳಿತವಿದೆ. ಐವರು ಸಚಿವರಲ್ಲಿ ಒಬ್ಬನೇ ಒಬ್ಬ ಸಚಿವರಾದರೂ ಜಿಲ್ಲಾ ವಿಭಜನೆಗೆ ಗಟ್ಟಿಯಾಗಿ ನಿಂತರೆ ಚಿಕ್ಕೋಡಿ ಹಾಗೂ ಗೋಕಾಕ ಎರಡೂ ಜಿಲ್ಲೆಗಳಾಗುವುದು ಕಷ್ಟವೇನಲ್ಲ ಎನ್ನುತ್ತಾರೆ ಈ ಭಾಗದ ಜನರು.