ಚಿಕ್ಕೋಡಿ: ಕೊರೊನಾ ಕಠಿಣ ಲಾಕ್ಡೌನ್ ಜಾರಿಯಲ್ಲಿದ್ದರೂ ಅಡ್ಡಾದಿಡ್ಡಿ ಸಂಚರಿಸಿದ ಸುಮಾರು 400 ವಾಹನಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ.
ಕೊರೊನಾ ಎರಡನೇ ಅಲೆ ತಡೆಗಟ್ಟಲು ಸರ್ಕಾರ ಹರಸಹಾಸ ಪಡುತ್ತಿದ್ದು, ಅಂತಾ ರಾಜ್ಯ ಸಂಪರ್ಕ ಕಡಿತಗೊಳಿಸಲು ರಸ್ತೆಗಳ ಮಧ್ಯದಲ್ಲಿ ಮಣ್ಣು ಹಾಕಿಸಿ ರಸ್ತೆ ಬಂದ ಮಾಡಲಾಗಿದೆ. ಅನಧಿಕೃತವಾಗಿ ತಿರುಗಾಡಿದವರಿಗೆ ದಂಡ ವಿಧಿಸಲಾಗುತ್ತಿದೆ. ಆದರೂ ಸಹಿತ ಜನ ಮಾತ್ರ ಬುದ್ಧಿ ಕಲಿಯುತ್ತಿಲ್ಲ. ಹೀಗಾಗಿ ಚಿಕ್ಕೋಡಿ ತಾಲೂಕಿನಲ್ಲಿ ಪೊಲೀಸರು ಅನಧಿಕೃತವಾಗಿ ತಿರುಗಾಡುತ್ತಿರುವವರ ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಹೀಗೆ ಸುಮಾರು 400 ವಾಹನಗಳನ್ನು ಸೀಜ್ ಮಾಡಿ ಪೊಲೀಸ್ ಠಾಣೆ ಎದುರು ನಿಲ್ಲಿಸಲಾಗಿದೆ ಎಂದು ಚಿಕ್ಕೋಡಿ ಸಿಪಿಐ ಆರ್ ಆರ್ ಪಾಟೀಲ ಮಾಹಿತಿ ನೀಡಿದರು.
ಕೊರೊನಾ ನಿಯಂತ್ರಣಕ್ಕಾಗಿ ಕಳೆದ ಹಲವು ದಿನಗಳಿಂದ ಕಟ್ಟುನಿಟ್ಟಿನ ಲಾಕ್ಡೌನ್ ಜಾರಿಯಲ್ಲಿದೆ. ಈ ಸಂದರ್ಭದಲ್ಲಿ ಬೇಕಾಬಿಟ್ಟಿಯಾಗಿ ಜನರು ಓಡಾಡಬಾರದು ಎಂಬ ಆದೇಶ ಇದ್ದರೂ ನಿಯಮಗಳನ್ನು ಗಾಳಿಗೆ ತೂರಿ, ಮಾಸ್ಕ್ ಇಲ್ಲದೆ, ಇಲ್ಲ ಸಲ್ಲದ ಕಾರಣ ಹೇಳಿ ತಿರುಗಾಡುತ್ತಿದವರ ಮೇಲೆ ಪೊಲೀಸ್ ಇಲಾಖೆ ಶಿಸ್ತಿನ ಕ್ರಮ ಜರುಗಿಸಿದೆ. ದಂಡ ನೀಡಿದ ಬಳಿಕ ಮರಳಿ ವಾಹನಗಳನ್ನು ನೀಡಲಾಗಿದ್ದು, ಕೊರೊನಾ ವೇಳೆ ಮೊದಲೇ ಜನರಿಗೆ ಕೆಲಸವಿಲ್ಲ. ಹೀಗಾಗಿ ದಂಡ ಜನರಿಗೆ ಹೆಚ್ಚಿನ ಹೊರೆಯಾಗಬಾರದೆಂಬ ಉದ್ದೇಶದಿಂದ 200 ರಿಂದ 300 ರೂ. ವರೆಗೆ ದಂಡ ವಿಧಿಸಿ ಜನರಿಗೆ ತಿಳಿ ಹೇಳಿ ಸೀಜ್ ಮಾಡಿದ ವಾಹನಗಳನ್ನು ಮರಳಿ ನೀಡಲಾಗಿದೆ ಎಂದು ಸಿಪಿಐ ಆರ್ ಆರ್ ಪಾಟೀಲ ಹೇಳಿದ್ರು.