ಚಿಕ್ಕೋಡಿ(ಬೆಳಗಾವಿ): ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಆರೋಪದ ಪ್ರಕರಣದಲ್ಲಿ ದಲಿತ ಹೋರಾಟಗಾರ ರವೀಂದ್ರ ಹಾರೋಹಳ್ಳಿ ಅವರನ್ನು ಚಿಕ್ಕೋಡಿ ಪೊಲೀಸರು ಮೈಸೂರಿನಲ್ಲಿ ಬಂಧಿಸಿ ಕರೆತಂದಿದ್ದಾರೆ. ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದ ಚಂದ್ರಶೇಖರ ಮುಂಡೆ ಎಂಬುವವರು ನೀಡಿದ ದೂರಿನ ಮೇರೆಗೆ ಪೊಲೀಸರು ಹಾರೋಹಳ್ಳಿ ಅವರನ್ನು ಬಂಧಿಸಲಾಗಿದೆ.
ಹಿಂದೂ ಧರ್ಮ ಹಾಗೂ ಹಿಂದೂ ದೇವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಲಾಗಿದೆ ಎಂದು ಆರೋಪಿಸಿ ರವೀಂದ್ರ ಹಾರೋಹಳ್ಳಿ ಹಾಗೂ ಕರೋಶಿ ಗ್ರಾಮದ ಚೇತನ ಹೊನ್ನಗೋಳ ವಿರುದ್ಧ 2017ರ ಡಿಸೆಂಬರ್ನಲ್ಲಿ ಚಿಕ್ಕೋಡಿ ಪೊಲೀಸ್ ಠಾಣೆಗೆ ಚಂದ್ರಶೇಖರ್ ಮುಂಡೆ ಎಂಬುವರು ದೂರು ನೀಡಿದ್ದರು.
ಆಗಲೇ ಚೇತನ ಹೊನ್ನಗೋಳ ಕೋರ್ಟ್ಗೆ ಹಾಜರಾಗಿದ್ದ. ಆದರೆ, 2019ರಿಂದ ಇದುವರೆಗೂ ರವೀಂದ್ರ ಕೋರ್ಟ್ಗೆ ಹಾಜರಾಗಿರಲಿಲ್ಲ. ಚಿಕ್ಕೋಡಿ ಪೊಲೀಸರ ಕೈಗೆ ಸಿಗದೇ ತಲೆಮರೆಸಿಕೊಂಡಿದ್ದ. ಇದೀಗ ಕೋರ್ಟ್ನಿಂದ ಜಾಮೀನು ರಹಿತ ವಾರಂಟ್ ಜಾರಿ ಮಾಡಿದ ಹಿನ್ನೆಲೆ ಮೈಸೂರು ಜಿಲ್ಲೆಯ ಹಾರೋಹಳ್ಳಿ ಗ್ರಾಮದಲ್ಲಿ ಆತನನ್ನು ಬಂಧಿಸಿ ಚಿಕ್ಕೋಡಿಗೆ ಕರೆತರಲಾಗಿದೆ.
ಹರಿಪ್ರಸಾದ್ ಖಂಡನೆ: ರವೀಂದ್ರ ಹಾರೋಹಳ್ಳಿ ಬಂಧನದ ಬಗ್ಗೆ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಖಂಡಿಸಿದ್ದಾರೆ. ಮೊನ್ನೆ ಜಿಗ್ನೇಶ್ ಮೇವಾನಿ, ಇಂದು ರವೀಂದ್ರ ಹಾರೋಹಳ್ಳಿ ಬಂಧನವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಕಾರಣಕ್ಕಾಗಿ ದಲಿತಪರ ಹೋರಾಟಗಾರರ ಬಂಧನವಾಗಿದೆ. ಹೋರಾಟಗಾರು, ಬರಹಗಾರರನ್ನು ಗುರಿಯಾಗಿಸಿಕೊಂಡು ಬಂಧಿಸುತ್ತಿರುವ ಬಿಜೆಪಿ ಸರ್ಕಾರದ ಫ್ಯಾಸಿಸ್ಟ್ ನಡೆಯನ್ನು ಖಂಡಿಸುತ್ತೇನೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆಸುತ್ತಿರುವ ದಾಳಿಯಾಗಿದೆ. ಕೂಡಲೇ ರವೀಂದ್ರ ಅವರನ್ನ ಬಿಡುಗಡೆ ಮಾಡಬೇಕೆಂದು ಅವರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: 8 ವರ್ಷದ ಬಾಲಕಿಗೆ ತಂದೆಯಿಂದ ಮಾರಣಾಂತಿಕ ಥಳಿತ: ಭಯಾನಕ ವಿಡಿಯೋ