ಬೆಳಗಾವಿ: ಜಿಲ್ಲೆಯ ಬಹುತೇಕ ತಾಲ್ಲೂಕುಗಳನ್ನು ಸರ್ಕಾರ ಅತಿವೃಷ್ಟಿಯಿಂದ ಹಾನಿಗೊಳಗಾದ ತಾಲ್ಲೂಕುಗಳ ಪಟ್ಟಿಯಿಂದ ಕೈಬಿಟ್ಟಿದ್ದು, ಇದನ್ನು ತೀವ್ರವಾಗಿ ಖಂಡಿಸುತ್ತೇನೆಂದು ಚಿಕ್ಕೋಡಿ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಹೇಳಿದರು. ಅಕ್ಟೋಬರ್ ತಿಂಗಳಲ್ಲಿ ಭಾರಿ ಮಳೆಯಾಗಿದ್ದು ತೀವ್ರ ಸ್ವಪೂರದ ಸಮಸ್ಯೆ ಉಂಟಾಗಿದ್ದು ಸರ್ಕಾರ ಮಳೆಯೇ ಬಿದ್ದಿಲ್ಲವೆಂದು ಪಟ್ಟಿಯಿಂದ ಹೊರಗಿಟ್ಟಿದ್ದು ಸರಿಯಲ್ಲ ಎಂದು ಅವರು ಕಿಡಿಕಾರಿದರು.
ಚಿಕ್ಕೋಡಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯಲ್ಲಿ ಖಾನಾಪೂರ, ಬೈಲಹೊಂಗಲ, ಗೋಕಾಕ ಕೇವಲ ಮೂರು ತಾಲ್ಲೂಕುಗಳನ್ನು ಮಾತ್ರ ಅತಿವೃಷ್ಠಿ ತಾಲೂಕು ಎಂದು ಘೋಷಣೆ ಮಾಡಿದ್ದಾರೆ. ಅತಿವೃಷ್ಠಿ ಹಾಗೂ ಪ್ರವಾಹದಿಂದ ಚಿಕ್ಕೋಡಿ, ನಿಪ್ಪಾಣಿ, ಕಾಗವಾಡ, ರಾಯಬಾಗ, ಅಥಣಿ ಹಾಗೂ ಹುಕ್ಕೇರಿಯಲ್ಲೂ ಸಾಕಷ್ಟು ಹಾನಿಯಾಗಿದೆ. ಆದರೆ ಇವುಗಳನ್ನು ಪಟ್ಟಿಯಿಂದ ಕೈ ಬಿಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಳೆಗಳು ಹಾಳಾಗಿ ಸಾಕಷ್ಟು ರೈತರು ಕಂಗಾಲಾಗಿದ್ದು, ಇವುಗಳ ಕುರಿತ ಸರ್ವೇಯನ್ನು ಸರ್ಕಾರ ಮಾಡಿಲ್ಲ. ಈ ಬಗ್ಗೆ ಜನರಿಗೆ ಇಲ್ಲಿನ ಬಿಜೆಪಿ ಪ್ರತಿನಿಧಿಗಳು ಸ್ಪಷ್ಟನೆ ಕೊಡಬೇಕು ಎಂದು ಆಗ್ರಹಿಸಿದರು. ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಸಚಿವೆ ಶಶಿಕಲಾ ಜೊಲ್ಲೆ ಪ್ರತಿನಿಧಿಸುವ ಕ್ಷೇತ್ರಗಳಲ್ಲಿಯೂ ಅಪಾರ ಹಾನಿಯಾಗಿದೆ. ಜಗದೀಶ್ ಶೆಟ್ಟರ್ ಬಂದು ಹೋಗಿದ್ದಾರೆ ಆದರೆ ನ್ಯಾಯ ಕೊಡಿಸಲಿಲ್ಲ ಎಂದು ಹೇಳಿದರು.