ಸವದತ್ತಿ (ಬೆಳಗಾವಿ): ಕೊರೊನಾ ವೈರಸ್ ಸೋಂಕಿನ ಆತಂಕದಲ್ಲಿರುವಾಗಲೇ ಮಳಗಲಿ ಗ್ರಾಮದಲ್ಲಿ ಚಿಕನ್ ಗುನ್ಯಾ ಸೇರಿದಂತೆ ವಿವಿಧ ಸಾಂಕ್ರಾಮಿಕ ಕಾಯಿಲೆ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ತಾಲೂಕಿನ ಹಿರೇಬೂದನುರು ಗ್ರಾಪಂ ವ್ಯಾಪ್ತಿಯ ಮಳಗಲಿ ಗ್ರಾಮದಲ್ಲಿ ಸುಮಾರು 4500 ಜನಸಂಖ್ಯೆ ಇದ್ದು, ಚರಂಡಿ ನೀರು ರಸ್ತೆಯ ಮೇಲೆ ಸಂಗ್ರಹವಾಗುತ್ತಿರುವುದರಿಂದ ಹಾಗೂ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಸಿ ತ್ಯಾಜ್ಯ ವಿಲೇವಾರಿ ಮಾಡದೇ ಇರುವುದರಿಂದ ಚಿಕನ್ ಗುನ್ಯಾ ಪ್ರಕರಣಗಳು ಕಂಡು ಬರುತ್ತಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಇನ್ನು ಈ ಗ್ರಾಮದಲ್ಲಿ ಒಂದೇ ಕುಟುಂಬವರಿಗೆ ಚಿಕನ್ ಗುನ್ಯಾ ವಕ್ಕರಿಸಿದ್ದು, ಒಟ್ಟು 12ಕ್ಕೂ ಹೆಚ್ಚಿನ ಜನರಲ್ಲಿ ಈ ಪ್ರಕರಣಗಳು ಕಂಡು ಬಂದಿದ್ದು, ಕೆಲವರಲ್ಲಿ ಕೆಮ್ಮು ಜ್ವರ ಆಗಾಗ ಬರುತ್ತಿರುವುದರಿಂದ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಜೊತೆಗೆ ಕಳೆದ ನಾಲ್ಕೈದು ದಿನಗಳಲ್ಲಿ ಮಳಗಲಿ ಗ್ರಾಮದಲ್ಲಿ ಚಿಕನ್ ಗುನ್ಯಾ ಪ್ರಕರಣ ಹೆಚ್ಚಾಗುತ್ತಿದ್ದು, ಈ ಕುರಿತು ಗ್ರಾಪಂ ಅಧಿಕಾರಿಗಳಿಗೆ, ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಪರಿಣಾಮ ಬಡವರು, ಕೂಲಿ ಕಾರ್ಮಿಕರು ಸಮರ್ಪಕವಾಗಿ ಚಿಕಿತ್ಸೆ ಸಿಗದೆ ಬಳಲುತ್ತಿದ್ದಾರೆ.
![chickenpox-cases-increased-in-savadatthi](https://etvbharatimages.akamaized.net/etvbharat/prod-images/kn-bgm-01-23-chicken-gunya-atanka-01-ka10029_23062020130931_2306f_1592897971_185.jpg)
ಹೀಗಾಗಿ ಜಿಲ್ಲಾಡಳಿತ, ಆರೋಗ್ಯ ಇಲಾಖೆಯ ಅಧಿಕಾರಿಗಳು ಕೂಡಲೇ ಚಿಕಿತ್ಸೆ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂಬುವುದು ಗ್ರಾಮಸ್ಥರ ಒತ್ತಾಯವಾಗಿದೆ.ಆದ್ರೆ,ಕಳೆದ ಒಂದು ವರ್ಷದಲ್ಲಿ ಮಳಗಲಿ ಗ್ರಾಮದಲ್ಲಿ ಒಳಚರಂಡಿಗಳ ಸ್ವಚ್ಛತೆ ಮಾಡದೇ ಇರುವುದರಿಂದ ಕೆಲವು ಕಡೆಗಳಲ್ಲಿ ಶೌಚಾಲಯದ ನೀರು ರಸ್ತೆಯ ಮೇಲೆ ಹರಿಯುತ್ತಿದೆ.
ಈ ನಡುವೆ ಎರಡು ದಿನಗಳ ಕಾಲ ನಿರಂತರವಾಗಿ ಮಳೆ ಸುರಿದ್ದರಿಂದ ಸೊಳ್ಳೆಗಳ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ಗ್ರಾಮದಲ್ಲಿ ಕೂಡಲೇ ಸ್ವಚ್ಛತಾ ಕೆಲಸ ಆರಂಭಿಸಲು ಜಿಪಂ ಅಧಿಕಾರಿಗಳು ಗ್ರಾಪಂಗೆ ಸೂಚನೆ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.