ಚಿಕ್ಕೋಡಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಗ್ರಾಮ ಪಂಚಾಯತ್ ಚುನಾಯಿತ ಜನಪ್ರತಿನಿಧಿಗಳ ಪಾತ್ರ ಪ್ರಮುಖವಾಗಿದ್ದು, ಪಕ್ಷದ ಅಭ್ಯರ್ಥಿಯ ಗೆಲುವಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ಯಮಕನಮರಡಿ ಪಟ್ಟಣದ ಹುಣಸಿಕೊಳ್ಳ ಮಠದ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಯಮಕನಮರಡಿ ಮತಕ್ಷೇತ್ರದ ಗ್ರಾಮ ಪಂಚಾಯತ್ ಚುನಾಯಿತ ಜನಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದರು. ಒಂದು ಸ್ಥಾನಕ್ಕಾಗಿ ಮಾತ್ರ ಸ್ಪರ್ಧಿಸಲು ಪಕ್ಷ ತೀರ್ಮಾನಿಸಿದೆ. ಗೆಲ್ಲುವ ಎಲ್ಲ ಅವಕಾಶವೂ ನಮಗಿದೆ. ಈ ಚುನಾವಣೆಯಲ್ಲಿ ನಾವು ಗೆಲ್ಲಲೇಬೇಕಿದೆ. ಹೀಗಾಗಿ, ಎಲ್ಲರೂ ಒಗ್ಗಟ್ಟಿನಿಂದ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕು ಎಂದರು.
ಚನ್ನರಾಜ್ ಹಟ್ಟಿಹೊಳಿ ಪಕ್ಷದ ಅಭ್ಯರ್ಥಿ:
ಚನ್ನರಾಜ್ ಹಟ್ಟಿಹೊಳಿ (Channaraj Hattiholi) ಅವರನ್ನು ಪಕ್ಷದ ಅಭ್ಯರ್ಥಿಯನ್ನಾಗಿಸಲು ಪಕ್ಷದ ವರಿಷ್ಠರು ಹಾಗೂ ಜಿಲ್ಲೆಯ ಎಲ್ಲ ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದೇವೆ. ಆದರೆ, ಇನ್ನು ಅಧಿಕೃತವಾಗಿಲ್ಲ. ಎರಡ್ಮೂರು ದಿನಗಳಲ್ಲಿ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಾಗುವುದು. ಟಿಕೆಟ್ ಅಧಿಕೃತವಾದ ನಂತರ ನ.22 ರಂದು ಚನ್ನರಾಜ್ ಹಟ್ಟಿಹೊಳಿ ಅವರು ಅತ್ಯಂತ ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.
ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ನಾಲ್ಕೂವರೆ ಸಾವಿರಕ್ಕಿಂತ ಹೆಚ್ಚು ಮತಗಳನ್ನು ಪಡೆದರು ಕೂಡ ಕಾಂಗ್ರೆಸ್ ಅಭ್ಯರ್ಥಿಗಳು ಸೋಲಬೇಕಾಯಿತು. ಮತಗಳ ವಿಭಜನೆಯಿಂದ ನಾವು ಸೋಲು ಕಾಣಬೇಕಾಯಿತು. ಹೀಗಾಗಿ, ಈ ಬಾರಿ ಒಬ್ಬರೇ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿದ್ದೇವೆ. ಮೂರು ಸಾವಿರಕ್ಕಿಂತ ಹೆಚ್ಚು ಮತಗಳನ್ನು ಪಡೆದರೆ ನಾವು ಜಯಗಳಿಸಲಿದ್ದೇವೆ ಎಂದು ಹೇಳಿದರು.
'ಆಮಿಷಗಳಿಗೆ ಬಲಿಯಾಗಬೇಡಿ':
ನಮ್ಮ ಎದುರಾಳಿಗಳು ಸಾಕಷ್ಟು ಚುನಾವಣೆಗಳನ್ನು ಮಾಡಿದ್ದಾರೆ. ನಿಮ್ಮ ಮೇಲೆ ಪ್ರಭಾವ ಬೀರಲು ಇಲ್ಲಿ ಬಂದು ವಿವಿಧ ರೀತಿಯಲ್ಲಿ ಸರ್ಕಸ್ ಮಾಡುತ್ತಾರೆ. ಆದರೆ, ತಾವು ಅವರ ಆಮಿಷಗಳಿಗೆ ಬಲಿಯಾಗದೇ, ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.ಪ್ರತಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವತಃ ನಾನೇ ಬಂದು ನಿಮ್ಮ ಸಮಸ್ಯೆಗಳನ್ನು ಆಲಿಸಿ, ಸಭೆಗಳನ್ನು ಮಾಡುತ್ತೇನೆ. ನಿಮ್ಮ ಸಮಸ್ಯೆ ಹಾಗೂ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಜಾರಕಿಹೊಳಿ ಭರವಸೆ ನೀಡಿದರು.