ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ರಾಜಕೀಯಕ್ಕೆ ಬರುವ ಮುನ್ನ ಅವರ ಆಸ್ತಿ ಎಷ್ಟಿತ್ತು. ಶಾಸಕ, ಸಚಿವರಾದ ಬಳಿಕ ಅವರ ಆಸ್ತಿ ಎಷ್ಟಾಗಿದೆ ಎಂಬುವುದನ್ನು ಸಾಬೀತುಪಡಿಸಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸವಾಲು ಹಾಕಿದರು.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಇಡಿ, ಐಟಿ, ಸಿಬಿಐ ಯಾವುದೇ ಸಂಸ್ಥೆ ಇರಲಿ, ದಾಳಿ ಮಾಡುವ ಮೊದಲು ಏಳೆಂಟು ತಿಂಗಳ ಕಾಲ ಸಿದ್ಧತೆ ಮಾಡಿಕೊಂಡಿರುತ್ತಾರೆ. ಡಿಕೆಶಿ ಸಾಚಾರಂತೆ ವರ್ತಿಸಬಾರದು. ಆರ್‌ಆರ್ ನಗರ ಮತ್ತು ಶಿರಾ ಉಪಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೃಷಿಗೆ ಸಂಬಂಧಿಸಿದಂತೆ ಮಸೂದೆ ತಿದ್ದುಪಡಿ ಮಾಡುವ ಮೂಲಕ ಕೃಷಿ ಕ್ಷೇತ್ರ ಸಮಗ್ರ ಬದಲಾವಣೆಗೆ ಐತಿಹಾಸಿಕ ತೀರ್ಮಾನ ತೆಗೆದುಕೊಳ್ಳಲಾಗಿದೆ. ಕೆಲ ರಾಜ್ಯಗಳ ಕಾಂಗ್ರೆಸ್ ನಾಯಕರು ರೈತರನ್ನು ತಪ್ಪುದಾರಿಗೆ ಏಳೆಯುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಅದರ ಮೈತ್ರಿ ಪಕ್ಷಗಳು ಮಸೂದೆ ಬಗ್ಗೆ ತಪ್ಪು ಮಾಹಿತಿ ನೀಡುತ್ತಿವೆ. ವಾಸ್ತವಿಕ ಸಂಗತಿಗಳನ್ನು ಜನರಿಗೆ ತಲುಪಿಸುವ ಪ್ರಯತ್ನ ನಾವು ಮಾಡುತ್ತಿದ್ದೇವೆ ಎಂದರು.
ಎಪಿಎಂಸಿ ಕಾಯ್ದೆ ತಿದ್ದುಪಡಿ ಬಗ್ಗೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿತ್ತು. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಕಾಯ್ದೆ ಜಾರಿಗೆ ತರಲು ಬಯಸಿದ್ದರು. ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯ 21ನೇ ಶಿಫಾರಸಿನಲ್ಲಿ ಎಪಿಎಂಸಿ ಕಾಯ್ದೆ ಬದಲಾವಣೆ ಮಾಡುತ್ತೇವೆ ಅಂತ ಹೇಳಿತ್ತು. ರಾಹುಲ್ ಗಾಂಧಿಯವರೇ ಈ ಕಾಯ್ದೆಯಿಂದ ನಿಮಗೇನೂ ತೊಂದರೆ. ನೀವು ನಿಮ್ಮ ಪ್ರಣಾಳಿಕೆಯಲ್ಲಿ ಹೇಳುವುದೊಂದು ಮಾಡುವುದೊಂದು ಮಾಡಬಹುದೇ? ರಾಹುಲ್ ಗಾಂಧಿ ಅವರು ಯಾವುದಾದರೂ ಕಾನೂನು ಪುಸ್ತಕ ಓದಿ ಎಂಎಸ್‌ಪಿ ಯಾವ ಕಾನೂನಿನಲ್ಲಿತ್ತು ಹೇಳಲಿ. ಎಪಿಎಂಸಿಗಳನ್ನು ನಾವು ಮುಚ್ಚುತ್ತಿಲ್ಲ ಎಂದು ಸ್ಪಷ್ಟ ಪಡಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಫ್ಯಾಮಿಲಿಗೂ ಕಮಿಷನ್ ಏಜೆಂಟ್ ಬೇಕು. ರೈತರ ರಕ್ತ ಹೀರುವ ಕಮಿಷನ್ ದಲ್ಲಾಳಿ ಪರ ಕಾಂಗ್ರೆಸ್ ಇದೆ. ಕಾಂಗ್ರೆಸ್ ಪಕ್ಷ ದಲ್ಲಾಳಿಗಳ ಪಕ್ಷ ಎಂದು ವಾಗ್ದಾಳಿ ನಡೆಸಿದರು.