ಚಿಕ್ಕೋಡಿ : ಗಡಿ ಭಾಗದ ಮಂಗಸೂಳಿ ಗ್ರಾಮದಲ್ಲಿ ಮೊದಲ ಬಾರಿಗೆ ಸರಳವಾಗಿ 66ನೇ ಕರ್ನಾಟಕ ರಾಜೋತ್ಸವ ಆಚರಣೆ ಮಾಡುವ ಮೂಲಕ ಹೊಸ ಇತಿಹಾಸ ಬರೆಯಲಾಗಿದೆ. ಮಂಗಸೂಳಿ ಗ್ರಾಮದ ಬಹುತೇಕ ಅಂಗಡಿ-ಮುಂಗಟ್ಟುಗಳು ಬಾಗಿಲು ತೆರೆದುಕೊಂಡಿವೆ.
ಚಿಕ್ಕೋಡಿ ಉಪವಿಭಾಗದ ವ್ಯಾಪ್ತಿಗೆ ಒಳಪಡುವ ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದಲ್ಲಿ 65 ವರ್ಷಗಳ ಬಳಿಕ 66ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ಮಹಾರಾಷ್ಟ್ರ ಪ್ರದೇಶಕ್ಕೆ ಹೊಂದಿಕೊಂಡಿರುವ ಮಂಗಸೂಳಿ ಗ್ರಾಮದಲ್ಲಿ ಕಳೆದ 65 ವರ್ಷಗಳಿಂದ ಕನ್ನಡ ರಾಜ್ಯೋತ್ಸವ ಆಚರಣೆ ಮಾಡದೇ ಕರಾಳ ದಿನಾಚರಣೆ ಮಾಡಲಾಗುತ್ತಿತ್ತು.
ಇದೇ ಮೊದಲ ಬಾರಿಗೆ ಜಿಲ್ಲಾಡಳಿತದ ಕಟ್ಟುನಿಟ್ಟಿನ ಆದೇಶದಂತೆ ಕಾಗವಾಡ ತಹಶೀಲ್ದಾರ್ ರಾಜೇಶ ಬುರ್ಲಿ ಹಾಗೂ ಅಥಣಿ ಸಿಪಿಐ ಶಂಕರಗೌಡ ಪಾಟೀಲ ನೇತೃತ್ವದಲ್ಲಿ ಮಂಗಸೂಳಿ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗಿದೆ.
ಜಿಲ್ಲಾಡಳಿತ, ತಾಲೂಕಾಡಳಿತ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳ ನಡೆಗೆ ಈ ಭಾಗದ ಕನ್ನಡ ಪ್ರೇಮಿಗಳಲ್ಲಿ ಮಂದಹಾಸ ಮೂಡಿದೆ.
ಆದ್ರೆ, ಕಳೆದ 65 ವರ್ಷಗಳಿಂದ ಕನ್ನಡ ರಾಜ್ಯೋತ್ಸವ ಆಚರಣೆ ದಿನವಾದ (ನ.1)ರಂದು ಮಂಗಸೂಳಿ ಗ್ರಾಮದಲ್ಲಿ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಲಾಗುತ್ತಿತ್ತು. ಈ ವರ್ಷ ಅದಕ್ಕೆ ಅಂತ್ಯ ಹಾಡಲಾಗಿದೆ.